ರಾಯಚೂರು: ಸಿಂಧನೂರು ನಗರ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಅವರು ಪಕ್ಷವೊಂದರ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ವೇಳೆ ಕೆರಳಿದ ಮುಖಂಡರು, ಕಾರ್ಯಕರ್ತರು ಪಿಎಸ್ಐ ಜತೆ ವಾಗ್ವಾದ ನಡೆಸಿದ್ದು, ಹೀಗಾಗಿ ನೂಕಾಟ - ತಳ್ಳಾಟ ನಡೆದಿದೆ. ನಗರಸಭೆ ವ್ಯಾಪ್ತಿಯಲ್ಲಿ ರಂಗಮಂದಿರ ಬರುವುದರಿಂದ ಈ ಬಗ್ಗೆ ನಗರಸಭೆಯಲ್ಲಿ ತೀರ್ಮಾನವಾದ ಬಳಿಕವೇ ಬಳಿಕ ಪುತ್ಥಳಿಯನ್ನು ಸ್ಥಾಪಿಸಬೇಕು. ನಗರಸಭೆ ಅನುಮತಿಯಿಲ್ಲದೇ ಯಾವುದೇ ಪುತ್ಥಳಿ ಸ್ಥಾಪನೆ ಮಾಡುವುದು ಬೇಡ, ಎಲ್ಲರ ಒಪ್ಪಿಗೆ ಹಾಗೂ ಚರ್ಚೆ ಮಾಡಿದ ಬಳಿಕ ಪುತ್ಥಳಿ ಸ್ಥಾಪಿಸುವಂತೆ ನಗರಸಭೆ ಪೌರಾಯುಕ್ತರು, ತಹಶೀಲ್ದಾರ್ ಅವರು ಪಕ್ಷವೊಂದರ ಕಾರ್ಯಕರ್ತರಿಗೆ ಹೇಳಿದ್ದಾರೆ. ಈ ವೇಳೆ ವಾಗ್ವಾದ ನಡೆದಿತ್ತು.
ಪೌರಾಯುಕ್ತರು ಹಾಗೂ ತಹಶೀಲ್ದಾರರು ಹೇಳಿದ ಬಳಿಕವೂ ಕೆಲವರು ಪುತ್ಥಳಿಯನ್ನು ಇರಿಸಿಕೊಂಡು ಹೋಗಲು ಟ್ರ್ಯಾಕ್ಟರ್ ಮೇಲೆ ಕುಳಿತುಕೊಂಡಿದ್ದಾರೆ. ಆಗ ಟ್ರ್ಯಾಕ್ಟರ್ ಮುಂದುಗಡೆ ಕುಳಿತಿರುವವರನ್ನು ಕೆಳಗಿಳಿಯುವಂತೆ ಪಿಎಸ್ಐ ತಾಕೀತು ಮಾಡಿದ್ದರಂತೆ. ಆದರೆ ಮಾತು ಕೇಳದ ಅವರಿಗೆ ಪಿಎಸ್ಐ ಲಾಠಿ ರುಚಿ ತೋರಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ವೇಳೆ, ಕೆರಳಿದ ಪಕ್ಷವೊಂದರ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಿಎಸ್ಐ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ, ನೂಕಾಟ - ತಳ್ಳಾಟ ನಡೆದಿದೆ. ಇದೇ ವೇಳೆ ಪಿಎಸ್ಐ ಅವರನ್ನು ಕಾರ್ಯಕರ್ತರು ತಳ್ಳಿದ್ದಾರೆ. ಹೀಗಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಸ್ಪಿ ಹಾಗೂ ಡಿವೈಎಸ್ಪಿ ಅವರ ಗಮನಕ್ಕೂ ತರಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ರಂಗಮಂದಿರ ಸುತ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ : ಟೌನ್ ಹಾಲ್ ಬಳಿ ರಂಗಮಂದಿರ ನಿರ್ಮಾಣ ಮಾಡುವ ವಿಚಾರ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿತ್ತು. ಇದೀಗ ಉದ್ಘಾಟನೆಗೆ ತಯಾರಿ ಕೂಡಾ ನಡೆದಿತ್ತು. ರಂಗಮಂದಿರಕ್ಕೆ ಹೆಸರು ಯಾವ ಹೆಸರು ನಾಮಕರಣ ಮಾಡಬೇಕು ಎನ್ನುವ ಚರ್ಚೆ ಕೂಡಾ ನಡೆದಿತ್ತು. ಅಷ್ಟೇ ಅಲ್ಲ ಈ ವಿಚಾರವಾಗಿ ನಗರಸಭೆ 45 ಅರ್ಜಿಗಳು ಸಲ್ಲಿಕೆ ಮಾಡಲಾಗಿದೆಯಂತೆ. ಹೀಗಾಗಿ ಶೀಘ್ರದಲ್ಲಿ ಸ್ಥಳೀಯ ಶಾಸಕರು, ನಗರಸಭೆ ಸದಸ್ಯರು, ಗಣ್ಯರು, ಗುರು-ಹಿರಿಯರು, ಸಂಘ-ಸಂಸ್ಥೆಗಳನ್ನು ಪ್ರಮುಖರನ್ನು ಕರೆದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಅಲ್ಲಿನ ನಗರಸಭೆ ಅಧ್ಯಕ್ಷರು ತಿಳಿಸಿದ್ದರು ಎಂದು ತಿಳಿದು ಬಂದಿದೆ.
ಹೀಗಾಗಿ ನಗರಸಭೆ ಅನುಮತಿ ಇಲ್ಲದೇ ಯಾರದೇ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ನಗರಸಭೆಯಿಂದ ಪೊಲೀಸ್ ಇಲಾಖೆಗೆ ಪತ್ರವನ್ನು ಬರೆದು, ಸೂಕ್ತವಾದ ಭದ್ರತೆಯನ್ನು ಒದಗಿಸುವಂತೆ ಕೋರಲಾಗಿತ್ತು. ಹೀಗಾಗಿ ರಂಗಮಂದಿರ ಸುತ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಕೆಲವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಎಂದು ಸಿಂಧನೂರು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಹಾವೇರಿ : ಹಿಂದೂಪರ ಸಂಘಟನೆ ಕಾರ್ಯಕರ್ತರ ಬೈಕ್ ಜಾಥಾ ಮೇಲೆ ಕಲ್ಲು ತೂರಾಟ