ಲಿಂಗಸುಗೂರು: ನಗರದ ಪುರಸಭೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಕೂಡ ಅಧ್ಯಕ್ಷ ಸ್ಥಾನ ಜೆಡಿಎಸ್ಗೆ ಒಲಿದು ಬಂದ ಅದೃಷ್ಟವಾಗಿದೆ.
ಪುರಸಭೆಯಲ್ಲಿ ಕಾಂಗ್ರೆಸ್ 13, ಜೆಡಿಎಸ್ 04, ಬಿಜೆಪಿ 02, ಪಕ್ಷೇತರ 04 ಸಂಖ್ಯಾಬಲ ಹೊಂದಿವೆ. ರಾಜ್ಯ ಸರ್ಕಾರ ಹೊರಡಿಸಿದ ಮೀಸಲಾತಿ ಜೆಡಿಎಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ (ಮಹಿಳೆ), ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಿತ್ತು. ಜೆಡಿಎಸ್ನಲ್ಲಿ ಮಾತ್ರ ಗದ್ದೆಮ್ಮ ಭೋವಿ, ಸುನಿತಾ ಕೆಂಭಾವಿ ಮಿಸಲಾತಿ ಸೌಲಭ್ಯ ಪಡೆಯಲು ಅರ್ಹತೆ ಹೊಂದಿದ್ದರು. ಹೀಗಾಗಿ ಈರ್ವರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆ ಗಳಿಗೆಯಲ್ಲಿ ಗದ್ದೆಮ್ಮ ಭೋವಿಗೆ ಜೆಡಿಎಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿತು.
ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಗದ್ದೆಮ್ಮ ಭೋವಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಎಂ.ಡಿ. ರಫಿ ನಾಮಪತ್ರ ಸಲ್ಲಿಸಿದ್ದರು. ತಲಾ ಒಂದೊಂದೆ ನಾಮಪತ್ರ ಬಂದಿದ್ದರಿಂದ ಚುನಾವಣಾಧಿಕಾರಿ ಚಾಮರಾಜ ಪಾಟೀಲ ಅವಿರೋಧ ಆಯ್ಕೆ ಘೋಷಿಸಿದರು.
ಇನ್ನು ಅವಿರೋಧ ಆಯ್ಕೆ ಘೋಷಣೆ ಆಗುತ್ತಿದ್ದಂತೆ ಜೆಡಿಎಸ್, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.