ರಾಯಚೂರು: ಮುಗಾರು ಹಂಗಾಮಿನ ಬಿತ್ತನೆ ಸಿದ್ಧತೆಯಲ್ಲಿ ತೊಡಗಿರುವ ರೈತರು ಅನಾಮಧೇಯ ನಕಲಿ ಬೀಜ ಪೊಟ್ಟಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಧಿಕೃತ ಬೀಜ ಮಾರಾಟಗಾರಿಂದ ಮಾತ್ರ ಖರೀದಿಸಬೇಕು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅವಶ್ಯಕತೆ ಇರುವ ಬೀಜ, ರಸಗೊಬ್ಬರ ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ತಿಳಿಸಿದರು.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಚೀನಾ ದೇಶದಿಂದ ಅನಾಮಧೇಯ ಜೀಜ ಪೊಟ್ಟಣ ರೈತರಿಗೆ ಅಂಚೆಯ ಮೂಲಕ ಸರಬರಾಜು ಮಾಡಲಾಗುತ್ತಿದೆ ಎನ್ನುವ ವಿಷಯ ಇಲಾಖೆಯ ಗಮನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಇಂತಹ ಪೊಟ್ಟಣ ಬಂದಿರುವ ಪ್ರಕರಣಗಳು ವರದಿಯಾಗಿಲ್ಲ. ರೈತರು ಇಂತಹ ಬೀಜದ ಪೊಟ್ಟಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಅಂತಹ ಪೊಟ್ಟಣಗಳು ಕಂಡು ಬಂದಲ್ಲಿ ಅದನ್ನು ಒಡೆಯದೆ ಸುಟ್ಟು ಹಾಕಬೇಕು. ಇಲ್ಲವೇ ಕೃಷಿ ಇಲಾಖೆ ಅಥವಾ ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು. ಒಂದು ವೇಳೆ ಅದನ್ನು ಬಿತ್ತಿದಲ್ಲಿ ಭೂಮಿ ಬಂಜರು ಆಗುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಸಿದ್ದು, ರೈತರು ಕೃಷಿ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಬಿತ್ತನೆ ಸಮಯದಲ್ಲಿ ನಕಲಿ ಬೀಜಗಳ ಮಾರಾಟದ ಹಾವಳಿ ಹೆಚ್ಚಾಗುತ್ತದೆ. ರೈತರು ಯಾವುದೇ ಕಾರಣಕ್ಕೂ ಮೋಸ ಹೋಗದೆ ಅಧಿಕೃತ ಬೀಜ ಮಾರಾಟಗಾರರ ಬಳಿ ವ್ಯವಹಾರ ಮಾಡಬೇಕು. ಅಗತ್ಯ ದಾಖಲೆಗಳನ್ನು ಬೆಳೆಗಳು ರಾಶಿಯಾಗುವವರೆಗೂ ಸಂಗ್ರಹಿಸಿಟ್ಟಿಕೊಳ್ಳಬೇಕು. ಇದರಿಂದ ಒಂದು ವೇಳೆ ಏನಾದರೂ ಸಮಸ್ಯೆಯಾದಲ್ಲಿ ಇಲಾಖೆ ರೈತರ ನೆರವಿಗೆ ಬರಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ 4.79 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ: ಮುಂಗಾರು ಹಂಗಾಮಿನಲ್ಲಿ 621.5 ಸೆ.ಮೀ. ಮಳೆ ಬೀಳಲಿದೆ. ವಾಡಿಕೆಯಂತೆ ಮೇ ತಿಂಗಳಲ್ಲಿ 47 ಮಿ.ಮೀ. ಮಳೆಯಾಗಿರುವುದರಿಂದ ಬಿತ್ತನೆ ಮಾಡಲು ಭೂಮಿ ಸಿದ್ಧತೆಗೆ ಅನುಕೂಲವಾಗಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆ ಮುಂಗಾರು ಹಂಗಾಮಿನ ಒಟ್ಟು 4.79 ಲಕ್ಷ ಹೆಕ್ಟೇರ್ ಪ್ರದೇಶ ಹೊಂದಿದದ್ದು, ಅದರಲ್ಲಿ ಖುಷ್ಕಿ 2.49 ಲಕ್ಷ ಹೆಕ್ಟೇರ್ ಹಾಗೂ ನೀರಾವರಿ 2.30 ಲಕ್ಷ ಹೆಕ್ಟೇರ್ ಪ್ರದೇಶವಿದೆ. 1.57 ಲಕ್ಷ ಹೆಕ್ಟೇರ್ ಭತ್ತ, 1 ಲಕ್ಷ ಹೆಕ್ಟೇರ್ ತೊಗರಿ, 1.55 ಲಕ್ಷ ಹೆಕ್ಟೇರ್ ಹತ್ತಿ ಬೆಳೆಗಳನ್ನು ಬೆಳೆಯುವ ಪ್ರದೇಶಗಳಾಗಿದ್ದು, ಇದರ ಜೊತೆಯಲ್ಲಿ ಸಜ್ಜೆ, ನವಣೆ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ.
3,108 ಕ್ವಿಂಟಾಲ್ ಬೀಜ ದಾಸ್ತಾನು: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ 3,898 ಕ್ವಿಂಟಾಲ್ ಬೀಜ ಅವಶ್ಯಕತೆ ಇದೆ. ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಲ್ಲಿ 2,041 ಕ್ವಿಂಟಾಲ್ ಭತ್ತ, 272 ಕ್ವಿಂಟಾಲ್ ಸಜ್ಜೆ, 10 ಕ್ವಿಂಟಾಲ್ ಮೆಕ್ಕೆಜೋಳ, 750 ಕ್ವಿಂಟಾಲ್ ತೊಗರಿ, 25 ಕ್ವಿಂಟಾಲ್ ಹೆಸರು, 10 ಕ್ವಿಂಟಾಲ್ ಸೂರ್ಯಕಾಂತಿ ಸೇರಿ ಒಟ್ಟು 3,108 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಹತ್ತಿ ಬಿತ್ತನೆಯ ಗುರಿ 1,744 ಕ್ವಿಂಟಾಲ್ ಇದ್ದು, ಹೆಚ್ಚವರಿಯಾಗಿ 3,500 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ.
5,1670 ಮೆಟ್ರಿಕ್ ಟನ್ ರಸಗೊಬ್ಬರ ಸಂಗ್ರಹ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಅವಶ್ಯಕತೆಗೂ ಅಧಿಕ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಯಾವುದೇ ರೀತಿಯ ರಸಗೊಬ್ಬರದ ಕೊರತೆಯಾಗುವುದಿಲ್ಲ. ಜಿಲ್ಲೆಗೆ 2.27 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇದ್ದು,16,500 ಮೆಟ್ರಿಕ್ ಟನ್ ಯೂರಿಯಾ, 3,453 ಮೆಟ್ರಿಕ್ ಟನ್ ಡಿಎಪಿ, 2,940 ಮೆಟ್ರಿಕ್ ಟನ್ ಎಂಒಪಿ, 28, 500 ಮೆಟ್ರಿಕ್ ಟನ್ ಎನ್.ಪಿ.ಕೆ, 227 ಮೆಟ್ರಿಕ್ ಟನ್ ಎಸ್.ಎಸ್.ಪಿ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ರೈತರು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಮೂಲಕ ಬೀಜ, ರಸಗೊಬ್ಬರ ಖರೀದಿ ಮಾಡಬೇಕು ಎಂದು ಡಾ. ಮಲ್ಲಿಕಾರ್ಜುನ ಮನವಿ ಮಾಡಿದ್ದಾರೆ.
ಓದಿ : ರಾಯಚೂರು: ರೈಸ್ ಮಿಲ್ ಮಾಲೀಕರಿಂದ ರೈತರಿಗೆ ಅನ್ಯಾಯ ಆರೋಪ