ರಾಯಚೂರು: ಜಿಲ್ಲೆಯಾದ್ಯಂತ ನಿನ್ನೆ ರಾತ್ರಿ ಗುಡುಗು ಮಿಂಚು, ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಭಾರೀ ಆವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಎಲ್ಬಿಎಸ್ ನಗರ, ಸಿಯಾ ತಲಾಬ್, ಮಡ್ಡಿಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಯಾ ತಲಾಬ್ ಬಡಾವಣೆಯಲ್ಲಿ ಚರಂಡಿ ನೀರಿನ ಸಮೇತ ಮಳೆ ನೀರು ಮನೆಗಳಿಗೆ ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಆಹಾರ ಪದಾರ್ಥಗಳು, ಮನೆ ಬಳಕೆ ಸಾಮಗ್ರಿ ನೀರುಪಾಲಾಗಿದೆ. ಎಲ್ಬಿಎಸ್ ನಗರದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ.
ಮೊದಲ ಮಳೆಯಿಂದ ನಗರದ ನಾನಾ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲದೆ ಚರಂಡಿಯ ನೀರು ರಸ್ತೆ ಮೇಲೆ, ಮನೆಗಳಿಗೆ ನುಗ್ಗಿರುವ ಪರಿಣಾಮ ಕೊರೊನಾ ಭೀತಿ ನಡುವೆ ಸಾಂಕ್ರಾಮಿಕ ಕಾಯಿಲೆ ಭೀತಿಯೂ ಎದುರಾಗಿದೆ.