ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಳ್ಳ, ನಾಲೆಗಳು ತುಂಬಿ ಹರಿಯುತ್ತಿವೆ. ಜಮೀನುಗಳಲ್ಲಿ ಬೆಳೆದು ನಿಂತ ಸಜ್ಜೆ, ತೊಗರಿ, ಶೇಂಗಾ ಸೇರಿದಂತೆ ತೋಟಗಾರಿಕೆ ಬೆಳೆ ಸಂಪೂರ್ಣ ಜಲಾವೃತಗೊಂಡಿವೆ. ರೈತರು ಉತ್ತಮ ಮಳೆಯಿಂದ ನಿರೀಕ್ಷಿತ ಫಸಲು ಪಡೆವ ಹಂತದಲ್ಲಿ ಇದ್ದಾಗ ನಿರಂತರ ಮಳೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ದುಃಸ್ಥಿತಿಗೆ ತಲುಪಿದ್ದು ತಾಲೂಕು ಆಡಳಿತ ರೈತರ ನೆರವಿಗೆ ಮುಂದಾಗಬೇಕು ಎಂದು ರೈತಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಬಹುತೇಕ ಜಮೀನುಗಳ ಸಂಪರ್ಕ ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಳೆದುಕೊಂಡಿವೆ. ನಿರಂತರ ಮಳೆಗೆ ನೂರಾರು ಮನೆಗಳು ನೆಲಸಮಗೊಂಡು ಬಡವರ ಬದುಕು ಬೀದಿಗೆ ಬರುವಂತಾಗಿದೆ. ನಾಲ್ಕಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವುದು ವರದಿಯಾಗಿದೆ.