ರಾಯಚೂರು: ನ.20ರೊಳಗೆ ತುಂಗಭದ್ರಾ ಮಂಡಳಿಯ ಐಸಿಸಿ ಸಭೆ ಕರೆದು ಬೇಸಿಗೆ ನೀರು ಹರಿಸುವ ಕುರಿತು ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ರಾಯಚೂರು ಜಿಲ್ಲೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಎಚ್ಚರಿಕೆ ನೀಡಿದ್ದಾರೆ.
ರಾಯಚೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಳೆದ ವರ್ಷದಲ್ಲಿ ಜಲಾಶಯದಲ್ಲಿನ ನೀರಿನ ಕೊರತೆ ಹಾಗೂ ನಿರ್ವಹಣೆ ಲೋಪದಿಂದ ಬೇಸಿಗೆ ಬೆಳೆಗೆ ನೀರು ಪೂರೈಕೆಯಾಗಲಿಲ್ಲ. ಪ್ರಸಕ್ತ ಸಾಲಿನಲ್ಲಿ ಜಲಾಶಯದಲ್ಲಿ 23ಟಿಎಂಸಿ ಹೆಚ್ಚುವರಿ ಸಂಗ್ರಹವಿದೆ. ಹೀಗಾಗಿ ನ.20ರೊಳಗಾಗಿ ತುಂಗಭದ್ರಾ ಮಂಡಳಿಯ ಐಸಿಸಿ ಸಭೆ ಕರೆದು, ಬೇಸಿಗೆ ಬೆಳೆಗೆ ಕಾಲುವೆ ನೀರು ಹರಿಸುವ ಕುರಿತಂತೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ತುಂಗಭದ್ರಾ ಮಂಡಳಿಯ ಅಧಿಕಾರಿಗಳು ನೀರಿನ ಸಂಗ್ರಹಣೆ ಬಗ್ಗೆ ತಪ್ಪು ಲೆಕ್ಕಾಚಾರ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ತುಂಗಭದ್ರಾ ಮೇಲ್ಡಂಡೆ ಹಾಗೂ ಕೆಳಭಾಗದ ಕಾಲುವೆ ನವೀಕರಣ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ವರದಿ ಸಲ್ಲಿಸಬೇಕು. ಈಗಿರುವ ಜಲಾಶಯ ನೀರಿನ ಸಂಗ್ರಹ ಸಾಮರ್ಥ್ಯದ ವರದಿಯನ್ನ ಕೂಡಲೇ ಮಾಡಿಸುವ ಮೂಲಕ ವರದಿ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್ ಟಿಎಲ್ಬಿಸಿ ಹಾಗೂ ಎನ್ಆರ್ಬಿಸಿ ನಾಲೆಯ ನೀರು ಹರಿಸುವ ಸಭೆ ಕರೆಯುವ ಕುರಿತು ತಿಳಿಸುವಂತೆ ಒತ್ತಾಯಿಸಿದ್ರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮುಖಂಡರಾದ ಎ.ವಸಂತಕುಮಾರ, ರಾಮಣ್ಣ ಇರಬಗೇರಾ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ರು.