ಲಿಂಗಸಗೂರು: ಘನಮಠ ಶಿವಯೋಗಿಗಳು ತಮ್ಮ ಶಿವಯೋಗ ಧ್ಯಾನದ ಬಲದಿಂದ ವಿಜ್ಞಾನಕ್ಕೂ ನಿಲುಕದ ಕೃಷಿ ಜ್ಞಾನ ಪ್ರದೀಪಿಕೆ ಗ್ರಂಥವನ್ನು ಬರೆದರು. ಶಿವಯೋಗಿಗಳು ಜನ ಬದುಕಲಿ ಎಂದು ಬದುಕಿದವರು, ಜನರಿಗಾಗಿ ಬದುಕಿದವರು ಎಂದು ಇಳಕಲ್ನ ಗುರುಮಹಾಂತ ಸ್ವಾಮೀಜಿ ಹೇಳಿದರು.
ಘನಮಠ ಶಿವಯೋಗಿಗಳ 141ನೇ ಪುಣ್ಯಸ್ಮರಣೋತ್ಸವದಲ್ಲಿ ಸಂಯಮ ಪ್ರಶಸ್ತಿ ಪುರಸ್ಕೃತ ಸನ್ಮಾನ ಸ್ವೀಕರಿಸಿ ನಂತರ ಆಶೀರ್ವಚನ ನೀಡಿದ ಅವರು, ಬಸವ ತತ್ವದ ಪ್ರಚಾರ ಮೂಲಕ ಕೃಷಿಕರ ಬಾಳಿಗೆ ಬೆಳಕು ನೀಡಿದ್ದು ಲಿಂಗೈಕ್ಯ ಘನಮಠದಾರ್ಯರು. ಇಳಕಲ್ನ ವಿಜಯಮಹಾಂತ ಶಿವಯೋಗಿಗಳು, ಸಂತೆಕೆಲ್ಲೂರಿನ ಘನಮಠದಾರ್ಯರು ತತ್ವ ನಿಷ್ಠೆ ವಿಷಯದಲ್ಲಿ ಉಗ್ರ ಸ್ವರೂಪಿಗಳು. ಉಳಿದಂತೆ ಅವರು ಕರುಣಾಮಯಿಗಳಾಗಿದ್ದರು. ಇಬ್ಬರೂ ಶ್ರೀಗಳು ತಮಗಾಗಿ ಬದುಕಿದವರಲ್ಲ. ಸಮಾಜದ ಜನರ ಒಳಿತು ಬಯಸಿ ನಾಡಿಗೆ ಮಹಾನ್ ಕೊಡುಗೆ ನೀಡಿದ್ದಾರೆ ಎಂದರು.
ಅದ್ದೂರಿ ಪಲ್ಲಕ್ಕಿ ಉತ್ಸವ
ಕೃಷಿ ಜ್ಞಾನ ಪ್ರದೀಪಿಕೆ ಮಹಾನ್ ಗ್ರಂಥದ ಮೂಲಕ ಮೂಲತಃ ಆಂಧ್ರಪ್ರದೇಶದಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುತ್ತ ಕೃಷಿ ಕಾಯಕದ ಜ್ಞಾನ ನೀಡಿ ರಾಯಚೂರು ಜಿಲ್ಲೆ ಸಂತೆಕೆಲ್ಲೂರು ಗ್ರಾಮದಲ್ಲಿ ಬಂದು ಲಿಂಗೈಕ್ಯರಾಗಿದ್ದು ಐತಿಹ್ಯ. ಅಂತೆಯೇ ಪ್ರತಿ ವರ್ಷದಂತೆ ಈ ವರ್ಷ ಕರ್ತೃ ಗದ್ದುಗೆಗೆ ಅಭಿಷೇಕ, ಹೂಗಳಿಂದ ಅಲಂಕಾರ ಮಾಡಿ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ನಂತರ ಪಲ್ಲಕ್ಕಿಗೆ ರಜತ ಸಾಮಗ್ರಿ, ಹೂಗಳಿಂದ ಅಲಂಕಾರ ಮಾಡಿ, ಘನಮಠ ಶಿವಯೋಗಿಗಳ ಭಾವಚಿತ್ರ ಪಲ್ಲಕ್ಕಿಯಲ್ಲಿ ಸ್ಥಾಪಿಸುತ್ತಿದ್ದಂತೆ ಮೆರವಣಿಗೆ ಆರಂಭಗೊಂಡಿತು.
ಬಾಜಾ ಭಜಂತ್ರಿ, ಡೊಳ್ಳು ಮೇಳ ಸಮೇತ ಗ್ರಾಮದ ಮುಖ್ಯ ಬೀದಿಗಳಲ್ಲಿ ಜಯಘೋಷ ಮಧ್ಯೆ ಪಲ್ಲಕ್ಕಿ ಮೆರವಣಿಗೆ ಸಾಗಿ ಮರಳಿ ಘನಮಠೇಶ್ವರ ಮಠಕ್ಕೆ ಆಗಮಿಸುತ್ತಿದ್ದಂತೆ ಧಾರ್ಮಿಕ ಕಾರ್ಯಕ್ರಮ ನಡೆಯಿತು.