ಲಿಂಗಸುಗೂರು: ತೋಟಗಾರಿಕೆ ಬೆಳೆಗಳಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ಮೊದಲ ಸ್ಥಾನದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿ ರೈತನೋರ್ವ ಮೊಟ್ಟ ಮೊದಲ ಬಾರಿಗೆ ದ್ರಾಕ್ಷಿ ಬೆಳೆ ಬೆಳೆದು ಹೆಸರು ಮಾಡಿದ್ದಾರೆ.
ಲಿಂಗಸುಗೂರು ತಾಲೂಕು ಕೆಸರಟ್ಟಿ ಗ್ರಾಮದಲ್ಲಿ ಸಚಿನ್ ಹನುಮಶೆಟ್ಟಿ ಎಂಬ ಪದವೀಧರ ಯುವ ರೈತ ತೋಟಗಾರಿಕೆಯಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಮೂಲಕ ರೈತರಲ್ಲಿ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ. ರೈತರು ಪಪ್ಪಾಯಿ, ದಾಳಿಂಬೆ ಸೇರಿದಂತೆ ಇತರೆ ಮಿಶ್ರ ಬೆಳೆಯ ಬೆಲೆಯಲ್ಲಿ ಕೆಲ ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿ ಕಬ್ಬು, ದ್ರಾಕ್ಷಿ ಇತರೆ ಬೆಳೆಗಳತ್ತ ಚಿಂತನೆ ನಡೆಸಿದ್ದಾರೆ. ಇನ್ನು ಬಹುತೇಕರು ಕಬ್ಬಿನ ಬೆಳೆಯತ್ತ ಮುಖ ಮಾಡಿದ್ದಾರೆ.
ರೈತ ಹನುಮಶೆಟ್ಟಿ ಇವರು ಪಂಡರಾಪುರ ಮೂಲದ ರೈತರ ಸ್ನೇಹದಿಂದ ಸೂಪರ್ ಸೊನಾಕ ತಳಿ ದ್ರಾಕ್ಷಿ ನಾಟಿ ಮಾಡಿ ಬಂಪರ್ ಬೆಳೆ ಬೆಳೆದಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳಲ್ಲೂ ಹರ್ಷ ಮೂಡಿಸಿದೆ. ಒಂದು ಎಕರೆ ತೋಟದಲ್ಲಿ 880 ಸಸಿಗಳನ್ನು ನಾಟಿ ಮಾಡಿರುವ ರೈತ ಸಾವಯವ ಕೃಷಿಗೆ ಆದ್ಯತೆ ನೀಡಿದ್ದು ವಿಶೇಷವಾಗಿದೆ. ಸ್ವಯಂ ಪ್ರಾಣಿಜನ್ಯ ಪೋಷಕಾಂಶ ಸಿದ್ಧಪಡಿಸಿ ಸಿಂಪಡಣೆ ಮಾಡಿದ್ದು, ಉತ್ತಮ ಇಳುವರಿಗೆ ಸಾಕ್ಷಿಯಾಗಿದೆ.
ಇನ್ನು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಮ್ಮದ್ ಅಲಿ ಸ್ವತಃ ತೋಟಕ್ಕೆ ಭೇಟಿ ನೀಡಿ ರೈತರು ಅನುಸರಿಸಿದ ಕೃಷಿ ಪದ್ಧತಿಯನ್ನು ತಿಳಿದುಕೊಂಡರು. ಮುಂದಿನ ವರ್ಷ ದ್ರಾಕ್ಷಿ ಬೆಳೆಗಾರರಿಗೆ ವಿಶೇಷ ಯೋಜನೆ ಸಿದ್ಧಪಡಿಸಿ ಪ್ರೋತ್ಸಾಹಿಸುವ ಭರವಸೆಯನ್ನು ಸಹ ನೀಡಿದ್ದಾರೆ.