ರಾಯಚೂರು: ರಾಜ್ಯದಲ್ಲಿ ಆವರಿಸಿರುವ ನೆರೆ ಹಾವಳಿಯ ರುದ್ರನರ್ತನದಿಂದ ಹಲವು ಜಿಲ್ಲೆಗಳು ತತ್ತರಿಸಿ ಹೋಗಿವೆ. ಹೀಗಾಗಿ ರಾಜ್ಯ ಸರ್ಕಾರ ಹಲವು ಜಿಲ್ಲೆಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ.
ಆದರೆ, ಜಿಲ್ಲೆಗಳಿಗೆ ಬಿಡುಗಡೆ ಮಾಡಿದ ಅನುದಾನ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯನ್ನ ರಾಜ್ಯ ಸರಕಾರ ಕೈಬಿಡುವ ಮೂಲಕ ಜಿಲ್ಲೆಯನ್ನ ನಿರ್ಲಕ್ಷ್ಯ ಮಾಡಿದೆ ಎನ್ನುವ ಬಲವಾದ ಆರೋಪ ಕೇಳಿ ಬಂದಿದೆ. 2019 ಅಗಸ್ಟ್ 9ರಂದು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಉತ್ತರ ಒಳನಾಡು, ದಕ್ಷಿಣ ಒಳನಾಡು ವ್ಯಾಪ್ತಿಗೆ ಬರುವ 14 ಜಿಲ್ಲೆಗಳಿಗೆ 100 ಕೋಟಿ ರೂಪಾಯಿ ಅನುದಾನವನ್ನ ಬಿಡುಗಡೆ ಮಾಡಿದೆ. ಆದರೆ, ರಾಯಚೂರು ಜಿಲ್ಲೆಯನ್ನ ಸರ್ಕಾರ ಮರೆತುಬಿಟ್ಟಿದೆ.
ಮಹಾರಾಷ್ಟ್ರ ಮಹಾಮಳೆಯಿಂದಾಗಿ ಜಿಲ್ಲೆಯ ಬಲಭಾಗದಲ್ಲಿ ಹರಿಯುವ ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುವ ಮೂಲಕ, ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿನ ಬೆಳೆ ಹಾನಿ ಸಂಭವಿಸಿ, ನಡುಗಡ್ಡೆ ಪ್ರದೇಶಗಳು, ನದಿ ಪಾತ್ರ ಗ್ರಾಮಗಳಿಗೆ ಹಾನಿ ಉಂಟು ಮಾಡಿ, ಜನಜೀವನ ಅಸ್ತವ್ಯಸ್ತಗೊಳಿಸಿದೆ. ಹೀಗಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ವೇಳೆ ನೆರೆ ಹಾವಳಿಗೆ ತುತ್ತಾಗಿರುವ ಜಿಲ್ಲೆಯಗಳಿಗೆ ತಾರತಮ್ಯ ಮಾಡದೆ ಅನುದಾನ ನೀಡಬೇಕು. ಆದರೆ, ಕೇವಲ 14 ಜಿಲ್ಲೆಗೆ ಮಾತ್ರ ನೆರವು ನೀಡಿ, ರಾಯಚೂರು ಜಿಲ್ಲೆಯನ್ನ ಕೈಬಿಟ್ಟಿರುವುದು ಸ್ಥಳೀಯರನ್ನು ಕೆರಳಿಸಿದೆ.