ರಾಯಚೂರು: ಇಲ್ಲಿನ ಯರಮರಸ್ ಥರ್ಮಲ್ ಪವರ್ ಸ್ಟೇಷನ್(ವೈಟಿಪಿಎಸ್)ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸರಬರಾಜು ಮಾಡಿದ್ದ ನೂರಾರು ಮೆಟ್ರಿಕ್ ಟನ್ ಕಲ್ಲಿದಲ್ಲು ಕಳ್ಳತನವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಗುತ್ತಿಗೆದಾರ ಶ್ರೀನಿವಾಸುಲು ಮತ್ತು ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲ್ಲಿದ್ದಲು ಕಳ್ಳತನದ ಬಗ್ಗೆ ಠಾಣೆಗೆ ದೂರು ನೀಡಿದ ವೈಟಿಪಿಎಸ್ ಅಧಿಕಾರಿ: ವೈಟಿಪಿಎಸ್‌ಗೆ ಸಿಂಗರೇಣಿ ಕೋಲ್ ಕೊಲೇರಿಸ್ ಲಿಮಿಟೆಡ್‌ನಿಂದ ಆ.19 ರಿಂದ ನ.20ರವರೆಗೆ ರೈಲ್ವೆ ವ್ಯಾಗನ್ ಮೂಲಕ ಕಲ್ಲಿದಲ್ಲು ಸರಬರಾಜು ಮಾಡಲಾಗಿತ್ತು. ಈ ಅವಧಿಯಲ್ಲಿ ಪೂರೈಕೆಯಾದ 5 ಲಕ್ಷ ಮೌಲ್ಯದ 120 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದಲ್ಲು ಕಳ್ಳತನ ಮಾಡಿ, ಯರಮರಸ್ ರೈಲ್ವೆ ಸ್ಟೇಷನ್ ಹೊರವಲಯದಲ್ಲಿ ಅನಧಿಕೃತ ಸ್ಥಳದಲ್ಲಿ ಶೇಖರಣೆ ಮಾಡಿ ಇಡಲಾಗಿದೆ ಎಂದು ಆರೋಪಿಸಿ ವೈಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ಜಿ.ಸಿ ರಾಯಚೂರು ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಗುತ್ತಿಗೆದಾರ ಶ್ರೀನಿವಾಸುಲು ಮತ್ತು ಯರಮರಸ್ ಸ್ಟೇಷನ್ ಮಾಸ್ಟರ್ ಕೈವಾಡವಿದೆ ಎಂದು ಮಹೇಂದ್ರ ಆರೋಪಿಸಿದ್ದಾರೆ. ಕರ್ನೂಲ್ ಶ್ರೀಗುರು ರಾಘವೇಂದ್ರ ಎಂಟರ್ ಪ್ರೈಸಸ್ನ ಶ್ರೀನಿವಾಸಲು, ಗುಂತಕಲ್ ಡಿವಿಜನ್ ಕಮರ್ಷಿಯಲ್ ಸೌತ್ ಸೆಂಟ್ರಲ್ ರೈಲ್ವೇ ಮೂಲಕ ಕಲ್ಲಿದ್ದಲು ವ್ಯಾಗನ್ ಸ್ವಚ್ಛಗೊಳಿಸುವ ಗುತ್ತಿಗೆ ಪಡೆದಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು: ಘಟನೆ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾಹಿತಿ ನೀಡಿದ್ದು, ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರದಲ್ಲಿ ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ವೈಟಿಪಿಎಸ್ ಇಡಿ ಮಹೇಂದ್ರ ಈ ಸಂಬಂಧ ದೂರು ನೀಡಿದ್ದಾರೆ. ದೂರುದಾರರ ಪ್ರಕಾರ ಸುಮಾರು 120 ಟನ್ ಕಲ್ಲಿದ್ದಲು ಕಳ್ಳತನವಾಗಿದ ಎಂದು ಫಿರ್ಯಾದಿ ಕೊಟ್ಟಿದ್ದಾರೆ. ಇದರಲ್ಲಿ ಎ1 ಆರೋಪಿತರಾಗಿ ಗುತ್ತಿಗೆದಾರ ಶ್ರೀನಿವಾಸುಲು ಮತ್ತು ಯರಮರಸ್ ಸ್ಟೇಷನ್ ಮಾಸ್ಟರ್ ಹೆಸರನ್ನು ದಾಖಲಿಸಿದ್ದಾರೆ. ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ವೈಟಿಪಿಎಸ್ ಮತ್ತು ಆರ್ಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಉತ್ಪಾದನೆ ಮಾಡುತ್ತವೆ. ಅದರಲ್ಲಿ ಶಕ್ತಿನಗರದ ಬೃಹತ್ ಶಾಖೋತ್ಪನ್ನ ಕೇಂದ್ರ ಆರ್ಟಿಪಿಎಸ್ನಲ್ಲಿ ಒಟ್ಟು 8 ಘಟಕಗಳು ಕಾರ್ಯನಿರ್ವಹಿಸುತ್ತವೆ. ಈ 8 ಘಟಕಗಳಿಂದ ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 1ರಿಂದ7 ಘಟಕಗಳು ತಲಾ 210 ಮೆಗಾವ್ಯಾಟ್, 8ನೇ ಘಟಕ 250 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ.
ವೈಟಿಪಿಎಸ್ ಶಾಖೋತ್ಪನ್ನ ಕೇಂದ್ರ ಒಟ್ಟು 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇದರಲ್ಲಿ ಎರಡು ಘಟಕಗಳಿದ್ದು ತಲಾ 800 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ.
ಇದನ್ನೂ ಓದಿ: ಹಾವೇರಿ: ಮುಂದುವರಿದ ಕಾಡಾನೆ ಹಾವಳಿ, ಕಟಾವಿಗೆ ಬಂದ ಬೆಳೆ ನಾಶ VIDEO