ರಾಯಚೂರು: ನಗರದ ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆ ಹಾಗೂ ರಾಯಚೂರು ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಐಎಎಸ್, ಕೆಎಎಸ್ ಪಾಸಾದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಲಕ್ಷ್ಮಿಕಾಂತ ರೆಡ್ಡಿ, ರಾಯಚೂರು ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದೆ ಎಂದು ಹೀಯಾಳಿಸುವುದೇ ಹೆಚ್ಚು. ಆದರೆ ಜಿಲ್ಲೆಯಲ್ಲಿಯೂ ಸಾಕಷ್ಟು ಜನ ಶ್ರಮಪಟ್ಟು ಉನ್ನತ ಸ್ಥಾನಕ್ಕೇರಿದ ಉದಾಹರಣೆಗಳಿವೆ. ಹಣೆಪಟ್ಟಿ ಬದಲಾಗಬೇಕಾದರೆ ನಾವು ಹಿಂದುಳಿದಿದ್ದೇವೆ ಎಂಬ ಮನೋಭಾವನೆ ತೆಗೆದುಹಾಕಬೇಕು. ಪ್ರತಿಯೊಬ್ಬರಿಗೂ ಶ್ರದ್ಧೆ-ಶಿಸ್ತು ಬಹಳ ಮುಖ್ಯ. ಇದರಿಂದ ಯಶಸ್ಸನ್ನು ಸಾಧಿಸಲು ಸಹಕಾರಿಯಾಗುತ್ತದೆ ಎಂದರು. ನಮಗೆ ಮೂಲಭೂತ ಸೌಕರ್ಯಗಳಿಲ್ಲ. ಬಡವರು, ಗ್ರಾಮೀಣ ಭಾಗದವರು ಎಂಬ ಇತ್ಯಾದಿ ಮನೋಭಾವನೆಯಿಂದ ಹೊರಗೆ ಬರಬೇಕು. ಸಾಧಿಸುವ ಛಲ-ಹಟ ನಿರಂತರವಾಗಿದ್ದರೆ ಏನಾದರೂ ಸಾಧಿಸಬಹುದು ಎಂದು ಸಲಹೆ ನೀಡಿದರು.