ರಾಯಚೂರು: ರಾಜಕೀಯ ಧುರೀಣರ ಮೇಲಿನ ಅಭಿಮಾನಕ್ಕೆ ಅವರ ಜನ್ಮದಿನ ಆಚರಿಸುವುದು, ಅವರ ಹೆಸರಿನಲ್ಲಿ ಸಂಘ ರಚನೆ, ಸಾಮಾಜಿಕ ಕಾರ್ಯಗಳು ಮಾಡುವುದು, ಅವರ ಆದರ್ಶಗಳನ್ನು ಸಾರುವುದು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ಅಭಿಮಾನಿ ತಮ್ಮ ನೆಚ್ಚಿನ ನಾಯಕ ಬದುಕಿರುವಾಗಲೇ ನೆಚ್ಚಿನ ನಾಯಕನ ಪುತ್ಥಳಿ ಸ್ಥಾಪಿಸಿ ಭಾರತ ರತ್ನ ಬಿರುದನ್ನು ಸ್ವಯಂ ಆಗಿ ನೀಡಿದ್ದಾನೆ.
ಹೌದು.. ಜಿಲ್ಲೆಯ ದೇವದುರ್ಗ ತಾಲೂಕಿನ ಗಾಣಧಾಳ ಗ್ರಾಮದಲ್ಲಿ ರೈತ ಪ್ರಭುರೆಡ್ಡಿ ಕೊಳ್ಳುರು ಎಂಬಾತ ತನ್ನ ಜಮೀನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮೂರ್ತಿಯನ್ನು ಸ್ಥಾಪಿಸಿ ಅದಕ್ಕೆ “ಭಾರತ ರತ್ನ”, “ಕನ್ನಡದ ಕಣ್ಮಣಿ”, “ದೇವದುರ್ಗ ತಾಲೂಕಿನ ದೊರೆ” ಎಂದು ಬರೆಸಿದ್ದಾನೆ.
ದೇವೇಗೌಡರು ಕೃಷ್ಣ ನದಿಯ ನೀರಿನ್ನು ನಾರಾಯಣಪುರ ಬಲದಂಡೆ ನಾಲೆ(ಎನ್ಆರ್ಬಿಸಿ) ಯೋಜನೆಯ ಮೂಲಕ ದೇವದುರ್ಗ ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರಿಂದ ಅವರ ಮೇಲಿನ ಅಭಿಮಾನಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ಪುತ್ಥಳಿ ನಿರ್ಮಿಸಿರುವುದಾಗಿ ರೈತ ಹೇಳಿಕೊಂಡಿದ್ದಾನೆ.
ಫೆ. 10ರಂದು ಜಿಲ್ಲೆಯ ದೇವದುರ್ಗ ತಾಲೂಕಿನ ಪ್ರವಾಸ ಹಮ್ಮಿಕೊಂಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಗಾಣಧಾಳ ಗ್ರಾಮದಲ್ಲಿ ರೈತ ಪ್ರಭುರೆಡ್ಡಿ ನಿರ್ಮಿಸಿರುವ ಸ್ಥಳಕ್ಕೆ ತೆರಳಿ ಪುತ್ಥಳಿ ವೀಕ್ಷಿಸಲಿದ್ದು, ಅವರಿಂದಲೇ ಅನಾವರಣ ಕಾರ್ಯಕ್ರಮ ನಡೆಯಲಿದೆ.