ರಾಯಚೂರು: 2018ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ 31ನೇ ವಾರ್ಡ್ನ ಸದಸ್ಯೆ ಸುಳ್ಳು ದಾಖಲೆಗಳನ್ನ ನೀಡಿ ಪರಿಶಿಷ್ಟ ಜಾತಿ(ಎಸ್ಸಿ) ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ನಗರದ ಸಿಯಾತಲಾಬ್ ಬಡಾವಣೆಯಲ್ಲಿರುವ ಸದಸ್ಯೆ ರೇಣಮ್ಮ ಭೀಮರಾಯ ಮನೆಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ನೇತೃತ್ವದ ತಂಡ ಭೇಟಿ ನೀಡಿ ವಿಚಾರಣೆ ನಡೆಸಿದೆ. 2018ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ 31ನೇ ವಾರ್ಡ್ಅನ್ನು ಪರಿಶಿಷ್ಟ ಜಾತಿಗೆ ಮೀಸಲು ಇರಿಸಲಾಗಿತ್ತು. ವಾರ್ಡ್ನ ಚುನಾವಣೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಚುನಾವಣೆಗೆ ಸ್ಪರ್ಧಿಸುವ ಮೂಲಕ ಜಯ ಗಳಿಸಿದ್ದಾರೆ. ಆದರೆ ದಲಿತ ಮಹಾಸಭಾ ಸಂಘಟನೆಯಿಂದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಪರ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ರೇಣಮ್ಮ ಭೀಮರಾಯ ಹಿಂದುಳಿದ ವರ್ಗಗಳ ಕೆಟಗಿರಿ-1 ಕಿಳ್ಳಿಕ್ಯಾತರ ಜಾತಿಗೆ ಸೇರಿದವರು. ಅವರು ತಹಶೀಲ್ದಾರ್ ಕಚೇರಿಗೆ ಶಿಳ್ಳೆಕ್ಯಾತರ ಎಂದು ಸುಳ್ಳು ಹೇಳಿಕೆ ನೀಡಿ ಪರಿಶಿಷ್ಟ ಜಾತಿ(ಎಸ್ಸಿ) ಎಂದು ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇವರ ಜಾತಿ ಪ್ರಮಾಣಪತ್ರ ರದ್ದುಗೊಳಿಸಿ, ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು. ಅಷ್ಟೇ ಅಲ್ಲದೆ ಸುಳ್ಳು ಹೇಳಿಕೆ ನೀಡಿ ಪ್ರಮಾಣಪತ್ರ ಪಡೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇನ್ನು ದೂರಿನ ಆಧಾರದ ಮೇಲೆ ಇಂದು ಸಹಾಯಕ ಆಯುಕ್ತರ ನೇತೃತ್ವದ ತಂಡ ಮನೆಗೆ ಭೇಟಿ ವಿಚಾರಣೆ ನಡೆಸಿದೆ. ಆದರೆ ವಿಚಾರಣೆಗೆ ತೆರಳಿದ ವೇಳೆ ರೇಣಮ್ಮ ಭೀಮರಾಯ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಮೀಸಲಾತಿ ಪ್ರಕಟಿಸಿದ್ದು, ರಾಯಚೂರು ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್-ಬಿಜೆಪಿ ಭಾರಿ ಕಸರತ್ತು ನಡೆಸುತ್ತಿವೆ.
ಇದೀಗ ನಗರಸಭೆ ಸದಸ್ಯೆಯ ಜಾತಿ ಪ್ರಮಾಣಪತ್ರ ವಿವಾದ ವಿಚಾರಣೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.