ರಾಯಚೂರು : ಲಿಂಗಸುಗೂರು ತಾಲೂಕಿನ ಮ್ಯಾದರಗಡ್ಡಿ ನಡುಗಡ್ಡೆ ಪ್ರವಾಹ ಸಂತ್ರಸ್ತರ ಸ್ಥಳಾಂತರಕ್ಕೆ ಮನವೊಲಿಸುವ ಯತ್ನ ವಿಫಲಗೊಂಡಿದ್ದು, ತಾಲೂಕು ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಮಂಗಳವಾರ ಪೊಲೀಸ್, ಕಂದಾಯ ಅಧಿಕಾರಿಗಳು ಮಾತುಕತೆ ನಡೆಸಲು ನಡುಗಡ್ಡೆಯಿಂದ ಕರೆತಂದಿದ್ದ ನಾಲ್ಕು ಜನರು, ಬಾಯಿ ಮಾತಿನ ಭರವಸೆ ನಮಗೆ ಬೇಡ. ಶಾಶ್ವತ ಸ್ಥಳಾಂತರ ಮಾಡಿ, ಇಲ್ಲ ನಡುಗಡ್ಡೆಗೆ ಬಿಡಿ ಹಣೆಬರಹ ಬದಲಾಗದು ಎಂದು ಅಧಿಕಾರಿಗಳ ಮುಂದೆ ಪಟ್ಟು ಹಿಡಿದಿದ್ದಾರೆ.
ಹದಿನೈದು ವರ್ಷಗಳಿಂದ ನಿಮ್ಮಂತಹ ಕೆಲವು ಅಧಿಕಾರಿಗಳು ಬಂದು ಭರವಸೆ ನೀಡಿ ವಂಚಿಸಿದ್ದಾರೆ. ನಮ್ಮನ್ನು ಕೂಡಿ ಹಾಕಿ ನಡುಗಡ್ಡೆಯಲ್ಲಿ ಇರುವ ಇತರರನ್ನು ಕರೆತರುವ ಯತ್ನ ನಡೆಸಿದರೆ, ಸರ್ಕಾರಿ ಕಚೇರಿಗಳ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರವಾಹ ಸಂದರ್ಭದಲ್ಲಿ ಗಂಜಿ ಕೇಂದ್ರಕ್ಕೆ ಕರೆ ತರುವ ಅಧಿಕಾರಿಗಳು, ಪ್ರವಾಹ ತಗ್ಗಿದ ವೇಳೆ ಇತ್ತ ಕಡೆ ಬಂದ ಇತಿಹಾಸವೇ ಇಲ್ಲ. ಏನಾದರೊಂದು ಶಾಶ್ವತ ಪರಿಹಾರ ಕಲ್ಪಿಸಿ, ಇಲ್ಲಾ ಪ್ರವಾಹಕ್ಕೆ ಕೊಚ್ಚಿ ಹೋದರೂ ಪರವಾಗಿಲ್ಲ, ನಡುಗಡ್ಡೆಯಲ್ಲಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ದೊಡ್ಡಮಲ್ಲಪ್ಪ ಮಾದರ ಎಂಬವರು ಹೇಳಿದ್ದಾರೆ.
ತಹಶೀಲ್ದಾರ್ ಚಾಮರಾಜ ಪಾಟೀಲ, ಅಗ್ನಿಶಾಮಕ ದಳದ ಜಿಲ್ಲಾ ಅಧಿಕಾರಿ ರವೀಂದ್ರ ಘಾಟ್ಗೆ ಬೆಳಿಗ್ಗೆಯಿಂದ ನಾಲ್ಕು ತಾಸು ಮನವೊಲಿಕೆ ಪ್ರಯತ್ನ ನಡೆಸಿದರೂ, ಜನ ಮಾತ್ರ ಪಟ್ಟು ಸಡಿಲಿಸಲಿಲ್ಲ. ಶಾಶ್ವತ ಸ್ಥಳಾಂತರ ಬಿಟ್ಟು, ಬೇರೆ ಮಾತು ಬೇಡ ಎನ್ನುತ್ತಿದ್ದಾರೆ ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ ತಿಳಿಸಿದ್ದಾರೆ.