ರಾಯಚೂರು: ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ನಗರದ ಎಲ್ವಿಡಿ ಮಹಾವಿದ್ಯಾಲಯ ಮತ್ತು ಎಸ್ಆರ್ಪಿಯು ಪದವಿಪೂರ್ವ ಕಾಲೇಜುಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದರು.
352 ಮೇಲ್ವಿಚಾರಕರು, ಸಹಾಯಕರ ನಿಯೋಜನೆ:
ಕ್ಷೇತ್ರದಲ್ಲಿ ಒಟ್ಟು 9 ಮತ ಎಣಿಕೆ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು 5 ಮತಗಟ್ಟೆಗಳನ್ನು ರ್ಯಾಂಡಮ್ ಆಗಿ ಆಯ್ಕೆ ಮಾಡಿ ಅಭ್ಯರ್ಥಿಗಳ/ ಏಜೆಂಟ್ಗಳ ಸಮ್ಮುಖದಲ್ಲಿ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಕೆ ಮಾಡಲಾಗುವುದು. ವೋಟ್ ಕೌಂಟಿಂಗ್ಗೆ ಒಟ್ಟು 352 ಮೇಲ್ವಿಚಾರಕರು ಹಾಗೂ ಸಹಾಯಕರನ್ನು ನಿಯೋಜಿಸಲಾಗಿದ್ದು, 181 ಮೈಕ್ರೋ ಅಬ್ಸರ್ವರ್ಗಳು ಸಹ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಪ್ರತಿಯೊಂದು ಸುತ್ತಿನಲ್ಲೂ ಮೈಕ್ರೋ ವೀಕ್ಷಕರು ಎರಡು ಕಂಟ್ರೋಲ್ ಯೂನಿಟ್ ಆರಿಸಿಕೊಂಡು ಮರು ಪರಿಶೀಲನೆ ಮಾಡುತ್ತಾರೆ. ಪ್ರತಿ ಸುತ್ತು ಮುಗಿದ ನಂತರ ಮಾಹಿತಿಯನ್ನು ಸಾಪ್ಟ್ವೇರ್ನಲ್ಲಿ ಆಪ್ಡೇಟ್ ಮಾಡಲಾಗುತ್ತದೆ. ಇನ್ನು ಮತ ಎಣಿಕೆ ಕೇಂದ್ರದ ಸುತ್ತಮುತ್ತಲು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಅಂಚೆ ಮತಗಳನ್ನು ಸ್ವೀಕರಿಸಲು ಮೇ.23ರ ಬೆಳಗ್ಗೆ 7.59 ನಿಮಿಷದರೆವರೆಗೆ ಅವಕಾಶವಿದೆ, ಈವರೆಗೆ ಅಂದಾಜು 2000 ಅಂಚೆ ಮತಗಳು ಸ್ವೀಕೃತಿಯಾಗಿವೆ ಎಂದರು. ಚುನಾವಣಾ ಆಯೋಗದ ವತಿಯಿಂದ ಶೋರಾಪೂರ, ಶಹಾಪೂರ, ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಶೈಲಾ.ಎ. ರಾಯಚೂರು ಗ್ರಾಮೀಣ ಮತ್ತು ನಗರ ಮತ್ತು ಮಾನವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ವೀಕ್ಷಕರಾಗಿ ಸಚೀಂದ್ರ ಪ್ರತಾಪ್ ಸಿಂಗ್, ದೇವದುರ್ಗ ಮತ್ತು ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕರಾಗಿ ಸಾಸೀಮ್ ಕುಮಾರ ಬರಾಯಿ ಅವರನ್ನು ನಿಯೋಜಿಸಲಾಗಿದೆ ಜಿಲ್ಲಾಧಿಕಾರಿ ಶರತ್ ಬಿ ವಿವರಿಸಿದರು.
ಮತ ಎಣಿಕೆ ಕೇಂದ್ರಕ್ಕೆ ವೀಕ್ಷಕರ ಭೇಟಿ:
ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಡೆಯಲಿರುವ ನಗರದ ಎಲ್ವಿಡಿ ಮಹಾವಿದ್ಯಾಲಯ ಮತ್ತು ಎಸ್ಆರ್ಪಿಯು ಕಾಲೇಜುಗಳಿಗೆ ಬುಧವಾರ(ಇಂದು) ಸಂಜೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು, ಚುನಾವಣಾ ವೀಕ್ಷಕರಾದ ಶೈಲಾ.ಎ, ಸಚೀಂದ್ರ ಪ್ರತಾಪ್ ಸಿಂಗ್, ಸಾಸೀಮ್ ಕುಮಾರ ಬರಾಯಿ, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮತ ಎಣಿಕೆ ಕೇಂದ್ರದ ಸಿದ್ಧತೆಯನ್ನು ಪರಿಶೀಲಿಸಿದರು.
ಎಸ್ಪಿ ಹೇಳಿಕೆ:
ಮತ ಎಣಿಕೆಯ ಸುತ್ತಮುತ್ತಲು 100 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ವಿಜಯೋತ್ಸವಕ್ಕೆ ಅವಕಾಶ ಕಲ್ಪಿಸಿಲ್ಲ. ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಚುನಾವಣಾ ಆಯೋಗ ನೀಡಿರುವ ಪ್ರವೇಶ ಪತ್ರ ಪಡೆದವರನ್ನು ಹೊರತುಪಡಿಸಿ ಬೇರೆ ಯಾರೂ ಪ್ರವೇಶ ಮಾಡುವಂತಿಲ್ಲ. ಹೀಗಾಗಿ ಮೂರು ಹಂತಗಳಲ್ಲಿ ತಪಾಸಣೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೇಂದ್ರದ ಒಳಗೆ ಮೊಬೈಲ್ ಫೋನ್ ಬಳಕೆಗೆ ನಿಷೇಧ ಹೇರಲಾಗಿದೆ. ಭದ್ರತೆಗಾಗಿ ಸಿಆರ್ಪಿಎಫ್ ಮತ್ತು ಪೊಲೀಸರು ಸೇರಿದಂತೆ 500 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್ಪಿ ಕಿಶೋರ್ಬಾಬು ತಿಳಿಸಿದರು.