ರಾಯಚೂರು: ರಾಜ್ಯದಲ್ಲಿ ಉತ್ತಮ ಮಳೆ ಸುರಿಯುತ್ತಿರುವುದರಿಂದ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಹೆಚ್ಚಳವಾಗಿದೆ. ಪರಿಣಾಮ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳಿಗೆ ವಿದ್ಯುತ್ ಬೇಡಿಕೆ ಕುಸಿತಗೊಂಡಿದ್ದು, ಶಾಖೋತ್ಪನ್ನ ಕೇಂದ್ರಗಳಿಗೆ ವಿರಾಮ ನೀಡಲಾಗಿದೆ.
ಕೊರೊನಾ ಸೋಂಕಿನ ಭೀತಿಯಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಇದರ ಪರಿಣಾಮ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಇತ್ತ ರಾಜ್ಯದ ನಾನಾ ಕಡೆಗಳಲ್ಲಿ ಉತ್ತಮವಾಗಿ ವರುಣ ಆರ್ಭಟ ತೋರಿಸುತ್ತಿದ್ದಾನೆ. ಹೀಗಾಗಿ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಏರಿಕೆ ಕಂಡಿದೆ.
ಎಷ್ಟೇ ಮಳೆಯಾಗಲಿ, ಕನಿಷ್ಠ ಒಂದೆರಡು ವಿದ್ಯುತ್ ಶಾಖೋತ್ಪನ್ನ ಕೇಂದ್ರಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗುತ್ತಿದ್ದವು. ಆದರೆ ಕೊರೊನಾ ಎಫೆಕ್ಟ್ನಿಂದ ಹಲವು ಕೈಗಾರಿಕೆಗಳು ಬಂದ್ ಆಗಿರುವ ಪರಿಣಾಮ ವಿದ್ಯುತ್ ಬೇಡಿಕೆ ಕೊಂಚ ಕಡಿಮೆಯಾಗಿದೆ. ರಾಜ್ಯಾದ್ಯಂತ ಉತ್ತಮವಾಗಿ ಸುರಿಯುತ್ತಿರುವ ಕಾರಣದಿಂದ ಮಳೆಯಿಂದ ಜಲಮೂಲ ವಿದ್ಯುತ್ ಕೇಂದ್ರಗಳಲ್ಲಿಯೂ ವಿದ್ಯುತ್ ಉತ್ಪಾದನೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಸದ್ಯ ರಾಜ್ಯದಲ್ಲಿ ಸರಿಸುಮಾರು ಗರಿಷ್ಠ ಎಂದರೂ 7,600 ಮೆಗಾವ್ಯಾಟ್ಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಳವಾಗಿದ್ದರೆ, ಸುಮಾರು 4,700 ಮೆಗಾವ್ಯಾಟ್ ಬೇಡಿಕೆಯಿದೆ. ಸೌರ ಹಾಗೂ ಪವನಶಕ್ತಿಯಿಂದ ರಾಜ್ಯಕ್ಕೆ ಸುಮಾರು 3,500 ಮೆಗಾವ್ಯಾಟ್ವರೆಗೆ ವಿದ್ಯುತ್ ಸಿಗುತ್ತಿದೆ. ಕೇಂದ್ರ ಜಾಲದಿಂದ ಸುಮಾರು 2,170 ಮೆಗಾವ್ಯಾಟ್ ವಿದ್ಯುತ್ ದೊರೆಯುತ್ತಿರುವುದರಿಂದ ರಾಜ್ಯದಲ್ಲಿನ ಶಾಖೋತ್ಪನ್ನ ಕೇಂದ್ರಗಳಿಗೆ ವಿಶ್ರಾಂತಿ ನೀಡುವ ಮೂಲಕ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.
ರಾಯಚೂರಿನ ಶಕ್ತಿನಗರ ಆರ್ಟಿಪಿಎಸ್ನ 8 ಘಟಕಗಳಿದ್ದು, ಈ ಘಟಕಗಳು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ವಿದ್ಯುತ್ ಬೇಡಿಕೆ ಕಡಿಮೆಯಾದಂತೆ ಹಂತ ಹಂತವಾಗಿ 8 ಘಟಕಗಳಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ವೈಟಿಪಿಎಸ್ನ ಎರಡು ಘಟಕಗಳಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.
ಬಳ್ಳಾರಿಯ ಬಿಟಿಪಿಎಸ್ನ ಮೂರು ಘಟಕಗಳು 1,700 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯ ಹೊಂದಿದ್ದು, ಕಳೆದ ತಿಂಗಳು ಬೇಡಿಕೆಯಿಲ್ಲದೇ ಇರುವ ಕಾರಣ ಬಂದ್ ಮಾಡಲಾಗಿದೆ.
ಕೊರೊನಾ ಸೋಂಕಿನಿಂದ ಹಲವು ಕೈಗಾರಿಕೆಗಳು ಬಂದ್ ಮಾಡಿರುವುದು ಹಾಗೂ ಲಾಕ್ಡೌನ್ ಜಾರಿ ಮಾಡಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಕುಸಿತ ಕಂಡಿದೆ. ಇತ್ತ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಮೂಲಗಳಿಂದ ವಿದ್ಯುತ್ ಉತ್ಪಾದನೆ ಏರಿಕೆಯಾಗಿದೆ.