ಲಿಂಗಸುಗೂರು (ರಾಯಚೂರು): ಕೊರೊನಾ ಲಾಕ್ಡೌನ್ ಮತ್ತು ದುಂಡಾಣು ರೋಗದಿಂದ ಕೋಟ್ಯಂತರ ರೂ. ಮೌಲ್ಯದ ದಾಳಿಂಬೆ ಬೆಳೆ ನಷ್ಟಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ 5,500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 750ಕ್ಕೂ ಹೆಚ್ಚು ರೈತರು ದಾಳಿಂಬೆ ಬೆಳೆ ಬೆಳೆದಿದ್ದಾರೆ. ವಾಣಿಜ್ಯ ಬೆಳೆಗಳಿಂದ ಆರ್ಥಿಕವಾಗಿ ಸಬಲೀಕರಣದ ಕನಸು ಕಂಡಿದ್ದ ರೈತರು ಸಾಲಬಾಧೆಯಿಂದ ನರಳುವಂತೆ ಆಗಿದೆ. ಪರ್ಯಾಯ ಮಾರ್ಗ ತಿಳಿಯದೇ ಕೈಚೆಲ್ಲಿ ಕುಳಿತಿದ್ದಾರೆ. ಲಿಂಗಸುಗೂರು ತಾಲೂಕಿನ ಕಡದರಗಡ್ಡಿ, ಯರಗೋಡಿ, ಶೀಲಹಳ್ಳಿ, ಗುಂತಗೋಳ, ಗೋನವಾಟ್ಲ, ಕಾಳಾಪುರ, ಈಚನಾಳ, ನೀರಲಕೇರಿ, ಕರಡಕಲ್ಲ, ಆನ್ವರಿ, ಗೌಡೂರು ಸೇರಿದಂತೆ ಬಹುತೇಕ ಗ್ರಾಮೀಣ ರೈತರು ಬೆಳೆದ ದಾಳಿಂಬೆ ದುಂಡಾಣುರೋಗ, ಕಾಯಿಕೊರಕ ರೋಗಕ್ಕೆ ತುತ್ತಾಗಿದೆ. ಕೃಷಿ ವಿಜ್ಞಾನಿಗಳ ಸಲಹೆಯಂತೆ ಅಗತ್ಯ ಕ್ರಿಮಿನಾಶಕ ಬಳಸಿದರೂ ನಿಯಂತ್ರಣಕ್ಕೆ ಬರದಾಗಿದೆ.
ಹಣ್ಣಿಗೆ ಬಿಟ್ಟಿರುವ ನೂರಾರು ಎಕರೆ ದಾಳಿಂಬೆಗೆ ತಿಂಗಳ ಹಿಂದಿನಿಂದ ದುಂಡಾಣುರೋಗ ಕಾಣಿಸಿಕೊಂಡಿತ್ತು. ಈ ಮಧ್ಯೆ ಕಾಯಿಕೊರಕದಿಂದ ಕಾಯಿಗಳು ಸೀಳುತ್ತಿದ್ದು, ನೂರಾರು ಟನ್ ದಾಳಿಂಬೆ ಹರಿದು ತಿಪ್ಪೆಗುಂಡಿಗೆ ಹಾಕುವಂತಾಗಿದೆ. ರೋಗಗಳ ಹಾವಳಿ ಒಂದಡೆಯಾದರೆ ಉಳಿದಂತೆ ಲಾಕ್ಡೌನ್ ಸಮಸ್ಯೆಯಿಂದ ಸೂಕ್ತ ಮಾರುಕಟ್ಟೆ ಸಿಗದೇ ರೈತ ಸಮೂಹ ಪರದಾಡುವಂತಾಗಿದ್ದು, ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾವು 4 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದೇವೆ. ಹಣ್ಣಿಗೆ ಬಿಟ್ಟಿರುವ ದಾಳಿಂಬೆ 75 ರಿಂದ 80 ಟನ್ ಇಳುವರಿ ನಿರೀಕ್ಷೆ ಹೊಂದಿದ್ದೆವು. ದುಂಡಾಣು ರೋಗ, ಕಾಯಿಕೊರಕದಿಂದ ಸಂಪೂರ್ಣ ನಷ್ಟವಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಾರದೇ ಹೋದರೆ ರೈತರು ಹೆಚ್ಚಿನ ತೊಂದರೆ ಅನುಭವಿಸುವುದು ನಿಶ್ಚಿತ ಎಂದು ಗೌಡಪ್ಪ ಪೂಜಾರಿ ನೀರಲಕೇರಿ ಹೇಳಿಕೊಂಡಿದ್ದಾರೆ.
ಮಳೆಗಾಲ ಮತ್ತು ಬೇಸಿಗೆ ಹವಾಮಾನ ವೈಪರೀತ್ಯಕ್ಕೆ ದುಂಡಾಣು ರೋಗ ಹರಡುವುದು ಸಾಮಾನ್ಯ. ಇಂತಹ ರೋಗದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ನೀಡಲು ಯಾವುದೇ ಯೋಜನೆಗಳಲ್ಲಿ ಅವಕಾಶವಿಲ್ಲ. ತಾಂತ್ರಿಕ ಸಲಹೆಗಳನ್ನು ಮಾತ್ರ ನೀಡಬಹುದು. ಇದನ್ನು ವಿಶೇಷ ಪ್ರಕರಣ ಎಂದು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯೋಗೇಶ್ವರ ಈಟಿವಿ ಭಾರತಗೆ ಸ್ಪಷ್ಟನೆ ನೀಡಿದ್ದಾರೆ.