ರಾಯಚೂರು : ಮೃತಪಟ್ಟಿದೆ ಎಂದು ತಿಳಿದು ನವಜಾತ ಹೆಣ್ಣು ಶಿಶುವನ್ನು ಪೋಷಕರು ಮಣ್ಣು ಮಾಡಲು ಹೋದಾಗ, ಅದು ಉಸಿರಾಡುತ್ತಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆ ವೈದ್ಯರೊಬ್ಬರು ಮಗು ಮೃತಪಟ್ಟಿರುವುದಾಗಿ ಪೋಷಕರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈರಪ್ಪ ಮತ್ತು ಅಮರಮ್ಮ ದಂಪತಿಗೆ ತುರುವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು.
ತುರುವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಶಿಶುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿತ್ತು. ಹೀಗಾಗಿ, ಸಿಂಧನೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯದ ಕೊರತೆ ಇದೆ ಎಂದು ಪೋಷಕರು ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಿದ್ದರು.
ಮಗುವನ್ನು ದಾಖಲಿಸಿಕೊಂಡು ಖಾಸಗಿ ಆಸ್ಪತ್ರೆಯವರು ಮೂರ್ನಾಲ್ಕು ದಿನ ಚಿಕಿತ್ಸೆ ನೀಡಿ, ಪ್ರತಿದಿನ ಸರಿಸುಮಾರು 10 ರಿಂದ 12 ಸಾವಿರ ರೂಪಾಯಿವರೆಗೆ ಬಿಲ್ ಮಾಡಿದ್ದಾರೆ. ಆದ್ರೆ, ಶನಿವಾರದಂದು ಏಕಾಏಕಿ ಹೆಣ್ಣು ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ತಿಳಿಸಿದ್ದಾರೆ.
ಮಗು ಮೃತಪಟ್ಟಿದೆ ಎಂದು ತಿಳಿದ ಪೋಷಕರು ತಮ್ಮ ಗ್ರಾಮವಾದ ತುರುವಿಹಾಳ ಪಟ್ಟಣಕ್ಕೆ ಕರೆದೊಯ್ದು, ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಅಷ್ಟರಲ್ಲಿ ಸಂಬಂಧಿಕರೊಬ್ಬರು ಮಗು ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ.
ಇದನ್ನೂ ಓದಿ: ಆ್ಯಸಿಡ್ ದಾಳಿಕೋರನ ವಿರುದ್ಧ ಸಾಕ್ಷ್ಯ ಕಲೆಹಾಕಲಾರಂಭಿಸಿದ ಪೊಲೀಸರು
ಆಗ ಮಗುವನ್ನು ಪುನಾಃ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಇದೀಗ ಪೋಷಕರು ಮತ್ತು ಸಂಬಂಧಿಕರು ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜೀವಂತ ಮಗುವನ್ನು ಸತ್ತಿದೆ ಎಂದು ವೈದ್ಯರು ಹೇಳಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ.