ರಾಯಚೂರು: ಹಾಸ್ಟೆಲ್‌ಗೆ ನೀರು ಪೂರೈಸುವಂತೆ ಆಗ್ರಹಿಸಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿರುವ ಘಟನೆ ರಾಯಚೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ನಗರದ ಹೊರವಲಯದ ಬೊಳಮಾನದೊಡ್ಡಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದಿ. ದೇವರಾಜು ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ರಾತ್ರಿ ವೇಳೆ ನೀರಿಗಾಗಿ ಪ್ರತಿಭಟನೆ ನಡೆಸಿದ್ದಾರೆ.
ವಸತಿ ನಿಲಯದ ಬಾಲಕಿಯರು ಮಾತನಾಡಿ, "ಕಳೆದ ಒಂದು ತಿಂಗಳಿನಿಂದ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಾಸ್ಟೆಲ್ ಮೇಲ್ವಿಚಾರಕಿ ಗಮನಕ್ಕೆ ತಂದಿದ್ದೆವು. ವಾರ್ಡನ್ ಕೂಡ ಸಮಸ್ಯೆ ಬಗ್ಗೆ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆ ಕೆಲ ದಿನಗಳ ಹಿಂದೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ, ಬೋರ್ವೆಲ್ ಹಾಕಿಸುವುದಾಗಿ ಹೇಳಿ ತೆರಳಿದ್ದರು. ಆದರೆ ಇದುವರೆಗೂ ಯಾವುದೇ ಕೆಲಸವಾಗಿಲ್ಲ. ಹಾಸ್ಟೆಲ್‌ಗೆ ಅತಿಥಿಗಳಂತೆ ಬಂದು ಹೋಗಿದ್ದಾರೆಯೇ ಹೊರತು, ನಮ್ಮ ನೀರಿನ ಸಮಸ್ಯೆಯನ್ನು ಪರಿಹರಿಸಿಲ್ಲ" ಎಂದು ತಾಲೂಕು ಹಾಗೂ ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹಾಸ್ಟೆಲ್ ವಾರ್ಡನ್ ಅನ್ನು ಈ ಬಗ್ಗೆ ವಿಚಾರಿಸಿದರೆ, "ಬಾಲಕಿಯರು ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ತಂದ ಕೂಡಲೇ ನಾವು ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅವರು ಬೋರ್ವೆಲ್ ಹಾಕಿಸಿಕೊಡುವುದಾಗಿ ಹೇಳಿದ್ದಾರೆ. ಆ ಬಗ್ಗೆ ಯಾವುದೇ ಕೆಲಸಗಳು ಪ್ರಾರಂಭವಾಗಿಲ್ಲ. ಬೋರ್ವೆಲ್ ಹಾಕಿಸಲು ಅನುಮತಿ ಬೇಕು ಎಂದು ಹೇಳಿದ್ದರು. ಅದನ್ನು ಕೂಡ ಫಾಲೋಪ್ ಮಾಡಲಾಗಿದೆ. ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ ನೀರು ಪೂರೈಕೆ ಮಾಡುವಂತೆಯೂ ಕೇಳಲಾಗಿದೆ. ನಾವು ನೀರು ಸರಬರಾಜು ಮಾಡುತ್ತೇವೆ, ಆದರೆ ನಗರಸಭೆ ನೀರಿನ ಮೇಲೆ ಅವಲಂಬಿತರಾಗಬೇಡಿ, ಬೋರ್ವೆಲ್ ಹಾಕಿಸುವತ್ತವೂ ಗಮನ ಹರಿಸಿ ಎಂದು ಸಲಹೆ ನೀಡಿದ್ದರು. ನೀರು ಇಲ್ಲದೆ ಇರುವಾಗ ಟ್ಯಾಂಕರ್ ನೀರು ತರಿಸಲಾಗಿದೆ" ಎಂದು ಹೇಳುತ್ತಿದ್ದಾರೆ. ಆದರೆ ಟ್ಯಾಂಕರ್ ನೀರು ಚೆನ್ನಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿರುವುದು ವಿದ್ಯಾರ್ಥಿಗಳ ಪರದಾಡಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ತಮ್ಮ ಕೆಲಸ ಖಾಯಂಗೊಳಿಸುವಂತೆ ಪೌರ ಕಾರ್ಮಿಕರ ಆಗ್ರಹ: ಶೃಂಗೇರಿಯಲ್ಲಿ ಮುಂದುವರಿದ ಪ್ರತಿಭಟನೆ