ರಾಯಚೂರು: ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳು ಮತ್ತು ಮನೆಗಳ ನಿರ್ಮಾಣಕ್ಕಾಗಿ ಒತ್ತಾಯಿಸಿ ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದವರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸಂಬಂಧಿತ ಇಲಾಖೆಗಳು ದೇವದಾಸಿ ಪದ್ಧತಿಗೆ ಸಿಲುಕಿದ ಮಹಿಳೆಯರಿಗೆ ಪುನರ್ವಸತಿ, ಅಗತ್ಯ ಮಾಸಾಶನ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಸಮಸ್ಯೆಗಳ ಸುಳಿಗೆ ಸಿಲುಕುವಂತಾಗಿದೆ. 205 ಮಂದಿಯ ಪುನರ್ವಸತಿಗಾಗಿ ನಗರದ ಆಶಾಪುರ ರಸ್ತೆಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಿದರೂ ವಿಮುಕ್ತ ಮಹಿಳೆಯರಿಗೆ (ಫಲಾನುಭವಿಗಳಿಗೆ ) ನೀಡಿಲ್ಲವೆಂದು ದೂರಿದರು.
ದೇವದಾಸಿ ಮಹಿಳೆಯರಿಗೆ ನೀಡುವ ಮಾಸಾಶನದ ವಯೋಮಿತಿ ತೆಗೆದುಹಾಕಬೇಕು. ಎಲ್ಲಾ ದೇವದಾಸಿ ಮಹಿಳೆಯರಿಗೆ ಕೃಷಿಗೆ ಯೋಗ್ಯವಾದ ಜಮೀನು ನೀಡಬೇಕು. ದೇವದಾಸಿ ವಿಮುಕ್ತ ಮಹಿಳೆಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು, ಸರ್ವೆ ಪಟ್ಟಿಯಿಂದ ಕೈಬಿಟ್ಟವರನ್ನು ಮರು ಸಮೀಕ್ಷೆ ಮಾಡಬೇಕು, ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ದೇವದಾಸಿ ಮಹಿಳೆಯರ ಮಕ್ಕಳಿಗೆ ಆದ್ಯತೆ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.