ರಾಯಚೂರು: ರಾಜ್ಯದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ನಿಷೇಧ ಮಾಡಿದ್ದರೂ ಕೂಡ ನಗರ ಸೇರಿದಂತೆ ಜಿಲ್ಲೆಯ ಹಲವು ವ್ಯಾಪಾರ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ, ಮಾರಾಟ ಎಗ್ಗಿಲ್ಲದೆ ನಡೆಯುತ್ತಲೇ ಇದೆ.
ಈ ಬಗ್ಗೆ ನಗರಸಭೆ ಅಧಿಕಾರಿಗಳು ಹಲವಾರು ಬಾರಿ ನಗರದ ತೀನ್ ಖಂದಿಲ್, ಪಟೇಲ್ ರಸ್ತೆ, ಮೀನಾ ಬಜಾರ್ ಮತ್ತಿತರೆಡೆ ವ್ಯಾಪಾರ ಕೇಂದ್ರಗಳ ಮೇಳೆ ದಾಳಿ ನಡೆಸಿ ಟನ್ಗಟ್ಟಲೆ ಪ್ಲಾಸ್ಟಿಕ್ ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಪ್ಲಾಸ್ಟಿಕ್ ಬಳಕೆ ನಿಲ್ಲುತ್ತಿಲ್ಲ. ಹಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳ ಗೋಡೆಗಳ ಮೇಲೆ ಇಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದು ಗ್ರಾಹಕರು ಸಹಕರಿಸಿ ಎಂಬ ಸ್ಟಿಕರ್ ಅಂಟಿಸಿದ್ದಾರೆ. ಆದರೆ ಏನಾದರೂ ಕಳಿಸಿದ ಗ್ರಾಹಕರಿಗೆ ಅವರೇ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ನಲ್ಲಿ ವಸ್ತುಗಳನ್ನು ಹಾಕಿ ಕೈಗೆ ಇಡುತ್ತಾರೆ.
ಬಹುತೇಕರು ಪ್ಲಾಸ್ಟಿಕ್ ಬಳಕೆಯನ್ನು ಇಂದಿಗೂ ನಿಲ್ಲಿಸಿಲ್ಲ. ಅಂತೆಯೇ ಪ್ಲಾಸ್ಟಿಕ್ ಬಳಸದ ಅಂಗಡಿಗಳನ್ನು ಕಾಣುವುದು ಅಸಾಧ್ಯ ಎಂಬಂತಾಗಿದೆ. ಹೀಗೆ ಜನರು ಬಳಸಿ ಎಸೆದಿರುವ ಪ್ಲಾಸ್ಟಿಕ್ ವಸ್ತುಗಳನ್ನು ದನಕರುಗಳು ಸೇವಿಸುವುದರಿಂದ ಅವುಗಳ ಜೀವಕ್ಕೆ ಮಾರಕವಾಗುತ್ತಿದೆ. ಹಾಗಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.