ರಾಯಚೂರು: ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಕಾರಿಗೆ ಮುತ್ತಿಗೆ ಯತ್ನಿಸಿ, ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿರುವ ಘಟನೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜರುಗಿದೆ.
ನಗರಕ್ಕೆ ಇಂದು ಇಲಾಖೆಯ ಪ್ರಗತಿ ಪರಿಶೀಲನೆಗಾಗಿ ಸಚಿವ ಪ್ರಭು ಚವ್ಹಾಣ್ ಆಗಮಿಸಿದ್ದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದಾಗ ದಲಿತ ಸಂಘಟನೆಯ ಮುಖಂಡರು ಸಚಿವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿ, ಕಪ್ಪು ಬಾವುಟ ತೋರಿಸಿದರು. ಹೋರಾಟಗಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸದಾಶಿವ ಆಯೋಗ ವರದಿ ವಿರೋಧಿಸಿ, ವರದಿಯನ್ನ ಜಾರಿ ಮಾಡಲು ಬಿಡುವುದಿಲ್ಲ ಎಂಬ ಪ್ರಭು ಚವ್ಹಾಣ್ ಹೇಳಿಕೆ ಹಿನ್ನೆಲೆ ದಲಿತ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿದರು.
ಮಲಿಯಾಬಾದ ಗೋ ಶಾಲೆಗೆ 15 ಲಕ್ಷ ರೂ. ಘೋಷಣೆ
ನಗರದ ಮಲಿಯಾಬಾದ್ ಗೋ ಶಾಲೆಗೆ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಲಿಯಾಬಾದ್‌ನಾದು ರಮಣಿ ಗೋಶಾಲೆ ಐತಿಹಾಸಿಕ ಗೋಶಾಲೆ. ಮಲಿಯಾಬಾದ ಗೋ ಶಾಲೆಗೆ 15 ಲಕ್ಷ ರೂ. ಅನುದಾನ ನೀಡಲಾಗುವುದು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಬಂದ್ಮೇಲೆ 400 ಕೇಸ್ಗಳನ್ನು ದಾಖಲಿಸಿ, 10 ಸಾವಿರ ಗೋವುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ಗೋ ಸಂಜೀವಿನಿ ಯೋಜನೆ ಮುಖಾಂತರ ಆ್ಯಂಬುಲೆನ್ಸ್ ನೀಡಿದ್ದೇನೆ. ಈ ಯೋಜನೆಯಿಂದ ಕೇಂದ್ರ ಸಚಿವರು ಮೆಚ್ಚಿಕೊಂಡು, ದೇಶವ್ಯಾಪಿ ವಿಸ್ತರಿಸಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೋವುಗಳ ಆರೋಗ್ಯದ ದೃಷ್ಟಿಯಿಂದ ಗೋ ಸಂಜೀವಿನಿ ಜಾರಿ ಮಾಡಿದ್ದೇವೆ. ರಾಜ್ಯದ 275 ತಾಲೂಕಿಗೂ ಒಂದು ಆ್ಯಂಬುಲೆನ್ಸ್ ನೀಡಲಾಗುತ್ತದೆ ಎಂದರು.