ಗಂಗಾವತಿ: ನಗರಸಭೆಗೆ ಮಂಜೂರಾದ 14ನೇ ಹಣಕಾಸು ಯೋಜನೆಯ 6.48 ಕೋಟಿ ರೂ ಮೊತ್ತದ ಅನುದಾನ ಬಳಕೆಯ ಸಂಬಂಧ ಹೈಕೋರ್ಟ್ನಲ್ಲಿ ದಾಖಲಾಗಿರುವ ದೂರನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆಯ ಬಗ್ಗೆ ಶಾಸಕ ಪರಣ್ಣ ಮುನವಳ್ಳಿ ಶಿಫಾರಸ್ಸು ಮಾಡಿದ್ದು ನಿಜ, ಕಾಂಗ್ರೆಸ್ ಸದಸ್ಯರು ತಾರತಮ್ಯವಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದೂ ನಿಜ. ನಾವು ಯಾರಿಗೂ ಮಣೆ ಹಾಕಿಲ್ಲ. ಆದರೆ ಕಾಂಗ್ರೆಸ್ ಸದಸ್ಯರು ಹೇಳಿದಂತೆ ಅನುದಾನವನ್ನು ಎಲ್ಲಾ ವಾರ್ಡುಗಳಿಗೆ ಹಂಚಿಕೆ ಮಾಡಲಾಗದು. ಜನರ ಅಗತ್ಯತೆಗಳ ಆಧಾರದ ಮೇಲೆ ಎಲ್ಲಿ ಅನುದಾನ ಬೇಕಿತ್ತೊ ಅಲ್ಲಿಗೆ ಬಳಸಿಕೊಂಡಿದ್ದೇವೆ ಎಂದು ಸ್ಪಷ್ಟೀಕರಿಸಿದ್ರು.
ಈ ಬಗ್ಗೆ ಕೋರ್ಟ್ನಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಸಮರ್ಥವಾಗಿ ವಾದ ಮಾಡುತ್ತೇವೆ. ಈಗಾಗಲೇ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿದ್ದು, ನಗರಸಭೆಯ ಅಧಿಕಾರಿಗಳೇ ನೇರವಾಗಿ ಕೋರ್ಟ್ ಗೆ ಹಾಜರಾಗುತ್ತಾರೆ ಎಂದರು.