ರಾಯಚೂರು: ಕೆಲ ವರ್ಷಗಳ ಹಿಂದೆ ಅಗ್ರಿಗೋಲ್ಡ್ ಗ್ರಾಹಕರನ್ನು ವಂಚನೆ ಮಾಡಿ ಕೋಟ್ಯಂತರ ರೂ. ಲಪಟಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಅಗ್ರಿಗೋಲ್ಡ್ನಲ್ಲಿ ಹಣ ಹಾಕಿದ್ದ ಗ್ರಾಹಕರು, ಹಣ ನೀಡುವಂತೆ ದಬಾಯಿಸಿ ಏಜೆಂಟರುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ರಾಯಚೂರು ಜಿಲ್ಲೆಯಲ್ಲಿ 12,00 ಜನ ಅಗ್ರಿಗೋಲ್ಡ್ ಕಂಪನಿಯಲ್ಲಿ ಏಜೆಂಟರಾಗಿ ಕೆಲಸ ಮಾಡಿದ್ದರು. ಆದರೆ ಕಂಪನಿ ಕೋಟ್ಯಂತರ ರೂ. ದೋಚಿ ಪರಾರಿಯಾದ ಬೆನ್ನಲ್ಲೇ ಗ್ರಾಹಕರು ಏಜೆಂಟರ ಮನೆ ಮುಂದೆ ಬಂದು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದು ಅನೇಕರು ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವರು ಊರು ಖಾಲಿ ಮಾಡಿ ಕುಟುಂಬ ಸದಸ್ಯರಿಂದ ದೂರವಾಗಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಜಗನ್ ನೇತೃತ್ವದ ಆಂಧ್ರ ಪ್ರದೇಶದ ಸರ್ಕಾರ 150 ಕೋಟಿ ಹಾಗೂ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ 250 ಕೋಟಿ ಬಿಡುಗಡೆ ಮಾಡಿ ಗ್ರಾಹಕರಿಗೆ ನೀಡುವ ಕೆಲಸ ಮಾಡಿತ್ತು. ಇದರಿಂದ ನಮ್ಮ ರಾಜ್ಯದ ಜನರೂ ಕೂಡ ಏಜೆಂಟರ ದುಂಬಾಲು ಬಿದ್ದಿದ್ದಾರೆ. ಈ ಪ್ರಕರಣದ ಕುರಿತು ಹೈದ್ರಾಬಾದ್ ಹೈಕೋರ್ಟ್ನಲ್ಲಿ ಪಿಐಎಲ್ ದಾಖಲಾಗಿದ್ದು ರಾಜ್ಯದ ಗ್ರಾಹಕರ ಪರವಾಗಿ ರಾಜ್ಯ ಸರ್ಕಾರ ವಕೀಲರನ್ನು ನೇಮಿಸಬೇಕು ಹಾಗೂ ಗ್ರಾಹಕರ ಹಣ ಪಾವತಿಸಿ ಅಗ್ರಿಗೋಲ್ಡ್ನಿಂದ ಹಣ ವಸೂಲಿ ಮಾಡಬೇಕೆಂದು ಹಣ ಕಳೆದುಕೊಂಡವರು ಒತ್ತಾಯಿಸಿದ್ದಾರೆ.