ರಾಯಚೂರು: ಮಳೆಯಿಂದಾಗಿ ಹಾನಿಯಾಗಿರುವ ಬೆಳೆಯನ್ನ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ರಾಯಚೂರಿನ ಕೃಷಿ ವಿವಿ ಪ್ರೇಕ್ಷಾಗೃಹ ಸಭಾಂಗಣದಲ್ಲಿ ಕೋವಿಡ್ 19, ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳ ಹಾಗೂ ರೈತರ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ಮಳೆ ಸುರಿದ ಪರಿಣಾಮ ಭತ್ತ ಸೇರಿದಂತೆ ನಾನಾ ಬೆಳೆಗಳು ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು. ಲಾಕ್ಡೌನ್ನಿಂದ ಕೃಷಿ ಉತ್ಪನ್ನಗಳಿಗೆ ಸರಕು, ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿರ್ದೇಶನ ನೀಡಲಾಗಿದೆ. ಜನರಿಗೆ ಅವಶ್ಯವಿರುವ ಪೆಟ್ರೋಲ್ ಹಾಗೂ ಡಿಸೇಲ್ಗೆ ಯಾವುದೇ ತೊಂದರೆ ಮಾಡಬಾರದು. ಕೃಷಿ ಚಟುವಟಿಕೆಗೆ ಸಹ ರೈತರಿಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೇ ಹೊರ ರಾಜ್ಯದಿಂದ ಬರುವ ಬೆಳೆಗಳಿಗೆ, ಕೃಷಿ ಯಂತ್ರೋಪಕರಣಗಳಿಗೆ ಯಾವುದೇ ನಿರ್ಬಂಧ ಹೇರಬಾರದು. ರೈತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಗಮನಹರಿಸಿ ಹಾಪ್ ಕಾಮ್ಸ್ ಗಳನ್ನ ತೆರೆದು ರೈತರಿಂದ ಬೆಳೆಗಳನ್ನು ಕೊಂಡು ಕೊಳ್ಳಬೇಕು ಎಂದರು.
ಇನ್ನು ಕೇಂದ್ರ ಸರಕಾರದಿಂದ ಅಗತ್ಯ ಅನುದಾನ ಬಂದಿದೆ ತೊಂದರೆಯಿಲ್ಲ. ಬರಗಾಲಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲ ತಾಲೂಕುಗಳನ್ನ ಬರಗಾಲ ಪೀಡಿತ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದರು. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.