ರಾಯಚೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ನಡೆಸಿದ್ದ ಸಮಯದಲ್ಲಿ ಜಿಲ್ಲೆಯಲ್ಲಿ ಭದ್ರತಾ ವೈಫಲ್ಯವಾಗಿದೆ ಎಂಬ ಆರೋಪದಡಿ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದ ಆದೇಶವನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ.
ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅಮಾನತು ಆದೇಶವನ್ನ ಹಿಂಪಡೆದುಕೊಂಡು, ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದ್ರೆ ಅವರ ವಿರುದ್ಧ ವಿಚಾರಣೆ ಮುಂದುವರಿಸಲಾಗುವುದು ಎಂದು ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಇನ್ನು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಾರಿಗೆ ಬಸ್ನಲ್ಲಿ ತೆರಳುವ ವೇಳೆ ರಾಯಚೂರು ಹೊರವಲಯದ ಯರಮರಸ್ ಬಳಿ ಟಿಯುಸಿಐ ಸಂಘಟನೆ ನೇತೃತ್ವದಲ್ಲಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಮತ್ತು ತುಂಗಭದ್ರಾ ಹಂಗಾಮಿ ನೌಕರರು ಬಸ್ ತಡೆದು ಪ್ರತಿಭಟನೆ ನಡೆಸಿದ್ದರು. ಹೀಗಾಗಿ, ಭದ್ರತಾ ವೈಫಲ್ಯ ಆಗಿದೆ ಎಂದು ರಾಯಚೂರು ಗ್ರಾಮೀಣ ಠಾಣಾ ಪಿಎಸ್ಐ ನಿಂಗಪ್ಪ ಮತ್ತು ಯರಗೇರಾ ಸಿಪಿಐ ದತ್ತಾತ್ರೇಯ ಕಾರ್ನಾಡ್ ಅವರನ್ನು ಅಮಾನತುಗೊಳಿಸಲಾಗಿತ್ತು.
ಈ ಇಬ್ಬರ ಪೈಕಿ ಸಿಪಿಐಯವರ ಸಂಸ್ಪೆಂಡ್ ಆದೇಶ ಹಿಂಪಡೆದಿದ್ದರೆ, ಪಿಎಸ್ ಐ ನಿಂಗಪ್ಪ ಅವರ ಅಮಾನತು ಆದೇಶವನ್ನ ಮುಂದುವರಿಸಲಾಗಿದೆ. ಸಿಪಿಐ ಅಮಾನತುಗೊಳಿಸಿದ ಕ್ರಮವನ್ನು ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು. ಅಲ್ಲದೆ ಆದೇಶ ರದ್ದುಪಡಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.