ರಾಯಚೂರು: ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದ ವೇಳೆ ಆರೋಗ್ಯದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಗುರುವಾರ ಮೃತಪಟ್ಟ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇದ್ದದ್ದು ಶನಿವಾರ ಸಂಜೆ ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಜಿಲ್ಲೆಗೆ ಮೇ 21 ರಂದು ಆಗಮಿಸಿದ್ದ ದೇವದುರ್ಗ ತಾಲೂಕಿನ ಕೋತಿಗುಡ್ಡ ಗ್ರಾಮದ 50 ವರ್ಷದ (ಪಿ-2597) ವ್ಯಕ್ತಿ ದೇವದುರ್ಗ ಪಟ್ಟಣದ ಕಸ್ತೂರಬಾ ವಸತಿ ನಿಲಯದ ಕಟ್ಟಡದಲ್ಲಿ ಕ್ವಾರಂಟೈನಲ್ಲಿದ್ದರು. ಮೇ 26 ರಂದು ಕ್ವಾರಂಟೈನ್‌ನಲ್ಲಿದ್ದಾಗ ಮೃತ ವ್ಯಕ್ತಿಯ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇನ್ನು ಆತನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಗುರುವಾರ ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ವ್ಯಕ್ತಿ ಮೃತಪಟ್ಟಿದ್ದು, ಸಂಜೆ ವೇಳೆ ಕೋತಿಗುಡ್ಡ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಸಾವಿಗೆ ಉಸಿರಾಟದ ತೊಂದರೆ ಹಾಗೂ ನ್ಯುಮೋನಿಯಾ ಕಾರಣ ಎಂದು ತಿಳಿಸಲಾಗಿತ್ತು.
ಮೃತ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಸ್ಥಳೀಯ ರಿಮ್ಸ್‌ನಲ್ಲಿರುವ ಪ್ರಯೋಗಾಲಯದ ಟ್ರೂ ನ್ಯಾಟ್ ಯಂತ್ರದಲ್ಲಿ ತಪಾಸಣೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೂ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ರವಾನಿಸಲಾಗಿತ್ತು. ಆದರೆ ವ್ಯಕ್ತಿ ಮೃತಪಟ್ಟು ಶವ ಸಂಸ್ಕಾರ ನಡೆಸಿದ ನಂತರದಲ್ಲಿ ಪ್ರಯೋಗಾಲಯದ ವರದಿ ಕೊರೊನಾ ಪಾಸಿಟಿವ್ ಎಂದು ಬಂದಿದೆ.
ಇನ್ನು ಈಗಾಗಲೇ ಮೃತ ವ್ಯಕ್ತಿಯ ಸಂಪರ್ಕದಲ್ಲಿದ್ದವರನ್ನು ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.