ರಾಯಚೂರು: ಕೊರೊನಾದಿಂದ ರಾಜ್ಯಾದ್ಯಂತ ಲಾಕ್ಡೌನ್ ಹೇರಿಕೆಯಾಗಿದ್ದು, ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ಕಳ್ಳತನದಂತಹ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ.
ಬೇಸಿಗೆ ಸಮಯದಲ್ಲಿ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇದೀಗ ಇಳಿಮುಖವಾಗಿವೆ. ವಾಹನಗಳ ಓಡಾಟದಿಂದ ಸಂಭವಿಸುತ್ತಿದ್ದ ರಸ್ತೆ ಅಪಘಾತಗಳಲ್ಲೂ ಗಣನೀಯ ಇಳಿಕೆಯಾಗಿದೆ. ಆದರೆ ಅಕ್ರಮ ಮದ್ಯ ಮಾರಾಟ, ಮದ್ಯದಂಗಡಿಗಳ ಕಳ್ಳತನ, ಜೂಜಾಟದ ಪ್ರಕರಣಗಳು ಹೆಚ್ಚಾಗಿವೆ.
ಈ ಕುರಿತಂತೆ ಎಸ್ಪಿ ಡಾ. ಸಿ.ಬಿ.ವೇದಮೂರ್ತಿ ಮಾತಿಹಿ ನೀಡಿದ್ದು, ಜಿಲ್ಲೆಯಲ್ಲಿ 2019 ಏ. 21ರವರೆಗೆ 167 ಕಳ್ಳತನ ಪ್ರಕರಣ ದಾಖಲಾಗಿದ್ದರೆ, 2020 ಏ. 21ರವರೆಗೆ 87 ಪ್ರಕರಣಗಳು ದಾಖಲಾಗಿವೆ. ರಸ್ತೆ ಅಪಘಾತಗಳು ಕಳೆದ ಸಾಲಿನಲ್ಲಿ 131 ದಾಖಲಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ 117 ದಾಖಲಾಗಿವೆ. ಕಳೆದ ವರ್ಷ 133 ಸಾಮಾನ್ಯ ಮನೆಗಳ್ಳತನವಾಗಿದ್ರೆ, ಈ ವರ್ಷ 72 ಪ್ರಕರಣ ದಾಖಲಾಗಿವೆ.
ಪೊಲೀಸ್ ಇಲಾಖೆ ಪ್ರಕರಣಗಳಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಲಾಕ್ಡೌನ್ ಜಾರಿಯಾದಾಗಿನಿಂದ ಪ್ರಕಣಗಳು ಹೆಚ್ಚಳವಾಗಿವೆ. 2019 ಮಾರ್ಚ್, ಏಪ್ರಿಲ್ ತಿಂಗಳನಲ್ಲಿ 20 ಜೂಜಾಟ ಪ್ರಕರಣಗಳು ದಾಖಲಾಗಿದ್ರೆ, 2020 ಮಾರ್ಚ್, ಏಪ್ರಿಲ್ 21ರವರೆಗ 65 ಪ್ರಕರಣಗಳು ವರದಿಯಾಗಿವೆ.
ಅಬಕಾರಿ ಪ್ರಕರಣಗಳಲ್ಲಿ 2019 ಮಾರ್ಚ್, ಏಪ್ರಿಲ್ ತಿಂಗಳಲ್ಲಿ 58 ಪ್ರಕರಣಗಳು ವರದಿಯಾಗಿದ್ದರೆ, 2020 ಮಾರ್ಚ್, ಏಪ್ರಿಲ್ 21ರವರೆಗೆ ತಿಂಗಳಲ್ಲಿ 82 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಮನೆಗಳ್ಳತನ, ರಸ್ತೆ ಅಪಘಾತ, ಕೊಲೆ ಪ್ರಕರಣಗಳಗಿಂತ ಮದ್ಯದಂಗಡಿ ಕಳ್ಳತನ, ಅಕ್ರಮ ಮದ್ಯ ಮಾರಾಟ ಪ್ರಕರಣಗಳು ತಲೆನೋವಾಗಿವೆ.