ಹುಬ್ಬಳ್ಳಿ/ರಾಯಚೂರು: ಪ್ರತಿದಿನ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ನಗರದ ಎಪಿಎಂಸಿ ಮಾರುಕಟ್ಟೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದು, ಜನರಿಲ್ಲದೆ ಬಿಕೋ ಎನ್ನುತ್ತಿದೆ.
ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆ ವ್ಯಾಪಾರ ವಹಿವಾಟಿಗೆ ಕೇಂದ್ರಬಿಂದುವಾಗಿದೆ. ಆದರೆ ಕೊರೊನಾ ಭೀತಿಯಿಂದ ಸರ್ಕಾರದ ಆದೇಶದ ಮೇಲೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದು, ಪ್ರತಿನಿತ್ಯ ಜನರು ತರಕಾರಿ ಸೇರಿದಂತೆ ವಿವಿಧ ಬೆಳೆಗಳಿಂದ ಕಂಗೊಳಿಸುತ್ತಿದ್ದ ಎಪಿಎಂಸಿ ಈಗ ಖಾಲಿ ಖಾಲಿಯಾಗಿದೆ.
ಸರ್ಕಾರದ ಮುಂದಿನ ಆದೇಶದವರೆಗೂ ಇದೇ ಪರಿಸ್ಥಿತಿ ಮುಂದುವರೆಯಲಿದ್ದು, ರೈತರು ಹಾಗೂ ಸಾರ್ವಜನಿಕರು ಎಪಿಎಂಸಿ ಕಡೆ ಮುಖ ಮಾಡುತ್ತಿಲ್ಲ. ಕೊರೊನಾ ಕರಿಛಾಯೆ ರಾಜ್ಯಾದ್ಯಂತ ಭೀತಿಯನ್ನು ಉಂಟುಮಾಡಿದ್ದು, ತರಕಾರಿ ಹಾಗೂ ವ್ಯಾಪಾರ ವಹಿವಾಟಿಗೂ ಬಿಸಿ ಮುಟ್ಟಿಸಿದೆ.
ರಾಯಚೂರಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್:
ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗುತ್ತಿದೆ. ನಗರದ ಪಟೇಲ್ ರೋಡ್, ಬಂಗಾರ್ ಬಜಾರ್, ನವೋದಯ ಆಸ್ಪತ್ರೆ ಸೇರಿದಂತೆ ನಾನಾ ಕಡೆಗಳಲ್ಲಿ ತೆರೆದಿರುವ ಅಂಗಡಿ-ಮುಗಟ್ಟುಗಳನ್ನು ಅಧಿಕಾರಿಗಳು ಬಂದ್ ಮಾಡಿಸುತ್ತಿದ್ದಾರೆ. ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮಾ.31ವರೆಗೆ ತೆರೆಯದಂತೆ ಸೂಚಿಸಲಾಗಿದೆ.