ರಾಯಚೂರು: ತೆಲಂಗಾಣ ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ 65ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ನೆರೆಯ ರಾಜ್ಯದಲ್ಲಿ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಹತ್ತು ವರ್ಷಗಳಿಂದ ಬಿಆರ್ ಎಸ್ ಆಡಳಿತದಿಂದ ರಾಜ್ಯದ ಜನ ರೋಸಿ ಹೋಗಿದ್ದಾರೆ. ನಿರುದ್ಯೋಗವು ಹೆಚ್ಚಾಗಿದ್ದು, ಈ ಹಿನ್ನೆಲೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಯುವಕರು ಕೆಲಸ ಮಾಡಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ತೆಲಂಗಾಣಕ್ಕೆ ತೆರಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಕ್ಷ ಸಭೆ ಹಿನ್ನೆಲೆ ಅಲ್ಲಿಗೆ ತೆರಳಿದ್ದಾರೆ ಎಂದರು.
ರಾಜ್ಯದಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಆಪರೇಷನ್ ಮಾಡುವಂತಹ ಅವ್ಯಶ್ಯಕತೆಯಿಲ್ಲ. ನಮ್ಮ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ನಮ್ಮ ಶಾಸಕರನ್ನು ಸಹ ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. 1989ರ ನಂತರ ಕಾಂಗ್ರೆಸ್ ಅತಿಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಿರುವುದು ಇದು ಎರಡನೇ ಸಲ. ಸದ್ಯ ನಮಗೆ ಅವಶ್ಯಕತೆ ಇದ್ದಷ್ಟು ಸ್ಥಾನಗಳು ಇವೆ. ಇದೀಗ ತೆಲಂಗಾಣದಲ್ಲಿ ಬಿಜೆಪಿ ಸೋಲನುಭವಿಸಿದರೆ ದಕ್ಷಿಣ ಭಾರತದಲ್ಲಿ ಅದರ ಬಾಗಿಲು ಮುಚ್ಚಿಕೊಳ್ಳಲಿವೆ ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ಛತೀಸ್‌ಗಡ್, ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಬರುತ್ತದೆ ಎನ್ನುವ ನೀರಿಕ್ಷೆಯಿದೆ. ರಾಜಸ್ಥಾನದಲ್ಲಿ ನಮ್ಮ ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಜೊತೆಗೆ ಛತೀಸ್‌ಗಢದಲ್ಲಿ ಸಹ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆಯಿದೆ. ಮಧ್ಯಪ್ರದೇಶ ಆರ್‌ಎಸ್‌ಎಸ್ ನೆಲೆ ಹೊಂದಿರುವುದರಿಂದ ಬಿಜೆಪಿಗೆ ಹೆಚ್ಚಿನ ಅವಕಾಶ ಇದ್ದು, ಅವರಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡಿದೆ ಎಂದು ತಿಳಿಸಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ : ಸಚಿವ ನಾಗೇಂದ್ರ - ಬಳ್ಳಾರಿ: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವಿದೆ. ಆದರೆ ಬಿಜೆಪಿ ಹಾಗೂ ಬಿಆರ್ ಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಭಯ ಇದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿವೆ.
ಆದರೆ ನಮ್ಮ ಶಾಸಕರಿಗೆ ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷದವರು ಸೇರಿ ಏನಾದರೂ ಮಾಡುತ್ತಾರೆ ಎನ್ನುವ ಭಯ ಇದೆ. ಹೀಗಾಗಿ ತೆಲಂಗಾಣ ಚುನಾವಣೆಯಲ್ಲಿ ಭಾಗಿಯಾದ ಎಲ್ಲ ಶಾಸಕರಿಗೆ ತುರ್ತು ಕರೆ ಬಂದಿದೆ. ಸಂಜೆ ಒಳಗೆ ತೆಲಂಗಾಣ ತಲುಪುವಂತೆ ಎಐಸಿಸಿ ಸೂಚನೆ ನೀಡಿದೆ. ಆದ ಕಾರಣ ನಾವು ಇಂದು ಸಂಜೆ ಒಳಗೆ ತೆಲಂಗಾಣಕ್ಕೆ ತಲುಪಲಿದ್ದೇವೆ ಎಂದು ಸಚಿವ ನಾಗೇಂದ್ರ ಹೇಳಿದರು.
ನಮಗೆ ನಮ್ಮ ಶಾಸಕರ ಮೇಲೆ ನಂಬಿಕೆ ಇದೆ. ಆದರೆ, ಬಿಜೆಪಿ ದೇಶದಲ್ಲಿ ಒಂದು ಕೆಟ್ಟ ಸಂಪ್ರದಾಯದಕ್ಕೆ ನಾಂದಿ ಹಾಡಿದೆ. ಬಿಜೆಪಿ ಗೆದ್ದವರಿಗೆ ಗಾಳ ಹಾಕುವ ಪ್ಲ್ಯಾನ್ ಮಾಡಿದೆ, ಅದಕ್ಕೆ ನಮ್ಮ ರಾಜ್ಯವೇ ಒಂದು ಉದಾಹರಣೆ ಎಂದು ತಿಳಿಸಿದ ಸಚಿವರು, ನಮ್ಮ ರಾಜ್ಯದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು, ಬಿಜೆಪಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದರು. ಅದು ನಮ್ಮ ಕಣ್ಣ ಮುಂದೆ ನಡೆದ ಘಟನೆ. ಹೀಗಾಗಿ ತೆಲಂಗಾಣದಲ್ಲಿ ಮತ್ತೆ ಆಪರೇಷನ್, ಮಾಡುವ ಸಾಧ್ಯತೆ ಇದೆ. ನಮ್ಮ ಶಾಸಕರಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ, ಹೀಗಾಗಿ ನಮ್ಮ ಶಾಸಕರ ರಕ್ಷಣೆಗೆ ನಾವು ಹೋಗುತ್ತಿದ್ದೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: ದಲಿತ ಸಿಎಂಗೆ ಕಾಲ ಕೂಡಿ ಬಂದಿಲ್ಲ, ಕಾಲ ಕೂಡಿ ಬಂದಾಗ ಹೇಳುತ್ತೇನೆ: ಸತೀಶ್ ಜಾರಕಿಹೊಳಿ