ರಾಯಚೂರು: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಮತ್ತೊಂದು ಗ್ರಾಮ ಸಿದ್ಧವಾಗ್ತಿದೆ. ಈ ನಿಟ್ಟಿನಲ್ಲಿ ಮಾನ್ವಿ ತಾಲೂಕಿನ ಕಕರೆಗುಡ್ಡ ಗ್ರಾಮದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಈ ಗ್ರಾಮದಲ್ಲಿ ಹಲವು ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ.
ಜೂನ್ 26ರಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕರೆಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಸಮಸ್ಯೆಗಳಿವೆ. ಹೀಗಾಗಿ ಜಿಲ್ಲಾಡಳಿತ ಸಮಸ್ಯೆಗಳ ಪಟ್ಟಿ ತಯಾರಿಸಿ, ಕಾಮಗಾರಿ ಕೈಗೊಂಡಿದೆ.
ಈಗಾಗಲೇ ಜಿಲ್ಲಾ ಉಸ್ತುವರಿ ಸಚಿವ ವೆಂಕಟರಾವ್ ನಾಡಗೌಡರ ಅಧ್ಯಕ್ಷತೆಯಲ್ಲಿ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಸಭೆ ನಡೆಸಲಾಗಿದೆ. ಅಧಿಕಾರಿಗಳಿಗೆ ಗ್ರಾಮದಲ್ಲಿ ಸಮಸ್ಯೆಗಳ ಪಟ್ಟಿ ಮಾಡಿ ಅದಷ್ಟು ಸಮಸ್ಯೆಗಳನ್ನ ಮತ್ತು ಕಾಮಗಾರಿಗಳನ್ನ ಪೂರ್ಣಗೊಳಿಸಬೇಕು. ಒಂದು ವೇಳೆ ಲೋಪವೇನಾದರೂ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ.
ಇನ್ನು ಗ್ರಾಮದಲ್ಲಿ ಎಲ್ಲೆಂದರಲ್ಲಿ ತಿಪ್ಪೆಗುಂಡಿಗಳು, ಜಾಲಿ ಮರಗಳು, ಗಿಡ-ಗಂಟೆಗಳು ಬೆಳೆದು ನಿಂತಿದ್ದು, ಅವುಗಳನ್ನ ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ ಬೋರ್ವೇಲ್ ಕೊರೆಸಲಾಗುತ್ತಿದೆ. ವಿದ್ಯುತ್ ಪರಿಕರಗಳನ್ನೂ ದುರಸ್ತಿಗೊಳಿಸಲಾಗುತ್ತಿದೆ. ಮುಖ್ಯವಾಗಿ ಸಿಎಂ ತಂಗಲಿರುವ ಸರ್ಕಾರಿ ಶಾಲೆಯ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಇಷ್ಟಕ್ಕೂ ಕರೆಗುಡ್ಡ ಗ್ರಾಮ ಹೇಳಿಕೊಳ್ಳುವಷ್ಟು ಕುಗ್ರಾಮವಲ್ಲವಾದರೂ, ಮೂಲಭೂತ ಸೌಲಭ್ಯಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ವಾಸ್ತವ್ಯದಿಂದ ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಪರಿಹಾರವಾಗುತ್ತದೆ ಎನ್ನುವ ನೆಮ್ಮದಿ ಗ್ರಾಮಸ್ಥರದ್ದು. ಸಿಎಂ ಆಗಮನಕ್ಕಾಗಿ ನಡೆಯುತ್ತಿರುವ ಕಾಮಗಾರಿಗಳು, ಸಿದ್ಧತೆಗಳು ತಾತ್ಕಾಲಿಕವಾಗಿರದೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.