ರಾಯಚೂರು: ಇತ್ತೀಚೆಗಷ್ಟೇ ಎಸ್ಎಸ್ಎಲ್ಸಿ ಮುಗಿಸಿದ್ದ ಅಪ್ರಾಪ್ತ ವಯಸ್ಸಿನ ಮಗಳನ್ನು ಪೋಷಕರೇ ವಿವಾಹ ಮಾಡಲು ನಿಶ್ಚಯಿಸಿದ್ದರು. ಆದ್ರೆ ಪೋಷಕರನ್ನು ತಡೆದ ಸಿಡಿಪಿಒ ಹಾಗೂ ಲಿಂಗಸುಗೂರು ಪೊಲೀಸರು ಬಾಲಕಿಯ ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.
ಲಿಂಗಸುಗೂರು ತಾಲೂಕಿನ ಕಾಳಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ಮದುವೆ ಮಾಡಲು ನಿಶ್ಚಯಿಸಿದ್ದನ್ನು ಖಚಿತಪಡಿಸಿಕೊಂಡ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಈ ಬಾಲ್ಯ ವಿವಾಹ ತಡೆದಿದ್ದಾರೆ.
ಬಾಲಕಿಯ ವಿವಾಹದ ವಿಷಯವನ್ನು ಖಚಿತಪಡಿಸಿಕೊಂಡ ಸಿಡಿಪಿಒ ಅಧಿಕಾರಿಗಳು ಹಾಗೂ ಲಿಂಗಸುಗೂರು ಪೊಲೀಸ್ ಠಾಣೆಯ ಎಎಸ್ಐ ಗದ್ದೆಪ್ಪ ಅವರು ಧಿಡೀರ್ ಭೇಟಿ ನೀಡಿ ಪೋಷಕರಿಗೆ ಬೆವರಿಳಿಸಿದ್ದಾರೆ. ಅಲ್ಲದೆ, ಸದ್ಯ ವಿವಾಹವನ್ನು ನಿಲ್ಲಿಸಿದ ಎಎಸ್ಐ ಗದ್ದೆಪ್ಪ ಅವರು ಬಾಲ್ಯ ವಿವಾಹ ಕಾನೂನು ಪ್ರಕಾರ ತಪ್ಪು ಅನ್ನೋದನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟು, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.