ರಾಯಚೂರು : ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಕಮಿಷನರ್ ಹಾಗೂ ಪೊಲೀಸರು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ರಾಯಚೂರಿನ ಯರಮರಸ್ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋದಲ್ಲಿ ಇರುವ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿ ಗಲಾಟೆ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಗ್ರಾಫಿಕ್ಸ್ ಮಾಡಿ ವಿವಾದಿತ ಫೋಟೋ ಹಾಕಿದ ವ್ಯಕ್ತಿಯ ಬಂಧನದ ಬಳಿಕವೂ ಗಲಾಟೆ ಮಾಡಿದ್ದು, ಪೊಲೀಸರ ಮೇಲೆ ಕಲ್ಲು ಎಸೆಯಲಾಗಿದೆ. ಪೊಲೀಸ್ ವಾಹನಗಳು ಜಖಂಗೊಳಿಸಿರುವುದು, ಹಿಂದೂ ದೇವಸ್ಥಾನದ ಮೂರ್ತಿ ಹಾನಿ ಮಾಡಿರುವುದು, ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿರುವುದರ ಬಗ್ಗೆ ಮಾಹಿತಿಯಿದೆ.
ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಸಮಾಜದ್ರೋಹಿಗಳು ಯಾರೇ ಇರಲಿ ಅವರನ್ನು ಬಂಧಿಸಿ ಕಾನೂನು ಪ್ರಕಾರ ಅವರಿಗೆ ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಕಳುಹಿಸುತ್ತೇವೆ ಎಂದರು.
ಇದನ್ನೂ ಓದಿ: ಪಾಲಿಬೆಟ್ಟ ಗ್ರಾಮದಲ್ಲಿ ಮಡುಗಟ್ಟಿದ್ದ ಮೌನ : 6 ಶವಗಳ ಸಾಮೂಹಿಕ ಅಂತ್ಯಸಂಸ್ಕಾರ
ಈ ಗಲಭೆ ಬಗ್ಗೆ ಸಮಗ್ರ ತನಿಖೆಯಾಗುತ್ತದೆ. ಸದ್ಯ ಓರ್ವ ಆರೋಪಿ ಸಿಕ್ಕಿದ್ದಾನೆ. ಇನ್ನೂ ಎಷ್ಟು ಎಷ್ಟು ಆರೋಪಿಗಳು ಇದ್ದಾರೋ ಅವರನ್ನು ಹೊರ ತೆಗೆಯುತ್ತೇವೆ. ಎಲ್ಲರನ್ನೂ ಬಂಧಿಸಿ ಅತ್ಯಂತ ಕಟೋರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಡಿಜೆ ಹಳ್ಳಿ, ಕೆಜಿಹಳ್ಳಿ ಮಾದರಿಯಲ್ಲೇ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿ ಹಿರಿಯ ಪೊಲೀಸ್ ಅಧಿಕಾರಿಗಳು ನನಗೆ ಕೊಟ್ಟಿದ್ದಾರೆ. ಮುಂದೆ ಇಂತಹ ಗಲಾಟೆ ಆಗದಂತೆ ನಮ್ಮ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.