ರಾಯಚೂರು: ಗಣೇಶನ ಮೂರ್ತಿಗಳ ವಿಸರ್ಜನೆ ಸದರಿ ದಿನದಂದು ಮೊಹರಂ ಆಚರಣೆ ಇರುವುದರಿಂದ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಪರಸ್ಪರ ಸೌಹಾರ್ದಯುತವಾಗಿ ಹಬ್ಬಗಳನ್ನು ಆಚರಿಸಿ ಕಾನೂನು ಸುವ್ಯವಸ್ಥೆಯನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಶರತ್ ಬಿ ಸೂಚಿಸಿದರು.
ಆ.26ರ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಣೇಶ ಹಾಗು ಮೊಹರಂ ಹಬ್ಬಗಳ ಶಾಂತಿಪಾಲನಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಬ್ಬಗಳನ್ನು ಎಲ್ಲಾ ಧರ್ಮದವರು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕೆಂದು ಹೇಳಿದರು.
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಸಂಬಂಧ ಏಕಗವಾಕ್ಷಿ ರೂಪದ ಪರವಾನಿಗೆಯನ್ನು ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪಡೆದು 20 ಜನರ ಹೆಸರನ್ನು ನೀಡಿ ಅದರಲ್ಲಿ 5 ಜನ ಹೆಸರನ್ನು ಮುಖ್ಯವಾಗಿ ನಮೂದಿಸಬೇಕು. ಸಂಚಾರ ವ್ಯವಸ್ಥೆ ಕಲ್ಪಿಸಲು ಸಲುವಾಗಿ 3, 5, 7 ಹಾಗೂ 9ನೇ ದಿನದಂದು ಗಣೇಶ ವಿಸರ್ಜನೆಯ ವೇಳೆಯನ್ನು ಮುಂಚಿತವಾಗಿ ಪೊಲೀಸ್ ಠಾಣೆಗೆ ತಿಳಿಸಬೇಕು. ವಿಸರ್ಜನೆ ಸ್ಥಳದಲ್ಲಿ ನಗರಸಭೆ ವತಿಯಿಂದ ಸೂಕ್ತ ದೀಪಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದೆಂದು ತಿಳಿಸಿದರು.
ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹಾಗೂ ಶಬ್ದ ಮಾಲಿನ್ಯ ದೃಷ್ಟಿಯಿಂದ 50ಕ್ಕಿಂತ ಹೆಚ್ಚಿನ ಡೆಸಿಬಲ್ವುಳ್ಳ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಗೆ ಮೇಲ್ಪಟ್ಟು ಬಳಸುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದಲ್ಲಿ ಕೋಮು ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಅಶ್ಲೀಲ ಹಾಡುಗಳನ್ನು ನಿಷೇಧಿಸಿದ್ದು, ಭಕ್ತಿ ಹಾಡುಗಳನ್ನು ಹಾಕಬೇಕು.
ಅಲ್ಲದೇ, ಸ್ಥಳದಲ್ಲಿ ಯಾವುದೇ ರೀತಿಯ ವಿದ್ಯುತ್ ಅವಘಡ ಸಂಭವಿಸದಂತೆ 5 ಬಕೆಟ್ ನೀರು 5 ಬಕೆಟ್ ಮರಳು ಸಿದ್ದಪಡಿಸಿಕೊಂಡಿರಬೇಕು. ಒಂದು ಪೆಂಡಲ್ ನಲ್ಲಿ 3 ರಿಂದ 4 ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಹಾಗೂ ಜಿಲ್ಲೆಯಾದ್ಯಂತ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಒಟ್ಟಾರೆಯಾಗಿ ಪರಿಸರ ಸ್ನೇಹಿ ಗಣಪತಿಗಳನ್ನು ಬಳಸಿ ಪರಿಸರ ಕಾಪಾಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ರಾಯಚೂರು ವಿಭಾಗೀಯ ಸಹಾಯಕ ಆಯುಕ್ತರಾದ ಸಂತೋಷ ಕುಮಾರ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸಿರುದ್ಧಿನ್, ತಾಲೂಕು ದಂಡಾಧಿಕಾರಿ ಡಾ.ಹಂಪಣ್ಣ, ಜಿಲ್ಲಾ ಅರೋಗ್ಯ ಅಧಿಕಾರಿ ಡಾ.ಎಮ್.ಕೆ.ಎನ್ ನಸೀರ್, ಕೇಂದ್ರಿಯ ಗಜಾನನ ಸಮಿತಿಯ ಕಾರ್ಯದರ್ಶಿ ಕೆ.ಪ್ರಶಾಂತ ಕುಮಾರ್ ಸೇರಿದಂತೆ ಮುಸ್ಲಿಂ ಹಾಗೂ ಹಿಂದೂ ಧರ್ಮಗಳ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.