ರಾಯಚೂರು: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ತಂದೆ ಯಶವೀರ್ ಸುನಕ್, ತಾಯಿ ಉಷಾ ಸುನಕ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ್ದರು. ಆರಂಭದಲ್ಲಿ ಗ್ರಾಮದ ಅಧಿದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಯರ ಮೂಲಬೃಂದಾವನ ದರ್ಶನ ಪಡೆದು, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು.
ಇದಾದ ಬಳಿಕ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು. ಈ ವೇಳೆ ಪೀಠಾಧಿಪತಿಗಳು ರಿಷಿ ಸುನಕ್ ತಂದೆ-ತಾಯಿಯವರಿಗೆ ವಸ್ತ್ರ, ಫಲ, ಮಂತ್ರಾಕ್ಷತೆ ಹಾಗೂ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಜತೆಗೆ ತಮ್ಮ ಪುತ್ರ ರಿಷಿ ಸುನಕ್ ಅವರಿಗೆ ರಾಯರ ಪವಿತ್ರವಾದ ಪ್ರಸಾದವನ್ನು ತಲುಪಿಸುವಂತೆ ಪೋಷಕರಿಗೆ ತಿಳಿಸಿದರು. ಈ ವೇಳೆ ಇನ್ಫೋಸಿಸ್ನ ಸುಧಾ ಮೂರ್ತಿ ಅವರಿಗೂ ಫಲ, ಪುಷ್ಪ ಹಾಗೂ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.
ಇದನ್ನೂ ಓದಿ: ಬೆಂಗಳೂರು: ಬ್ರಿಟನ್ ಪ್ರಧಾನಿ ತಾಯಿ ಉಷಾ ಸುನಕ್ ರಿಂದ ಕೃಷ್ಣ ಜನ್ಮಾಷ್ಟಮಿ ಸಾಂಪ್ರದಾಯಿಕ ಪೂಜೆ..
ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿದ ರಿಷಿ ಸುನಕ್ ದಂಪತಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಸೆ.10ರಂದು ದೆಹಲಿಯ ಪ್ರಸಿದ್ಧ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಜಿ20 ನಾಯಕರು ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಲು ರಾಜ್‌ಘಾಟ್‌ಗೆ ತೆರಳುವ ಮುನ್ನ ಸುನಕ್ ಮತ್ತು ಪತ್ನಿ ಮುಂಜಾನೆಯೇ ಅಕ್ಷರಧಾಮಕ್ಕೆ ತೆರಳಿದ್ದರು. ಅಕ್ಷರಧಾಮ ದೇವಸ್ಥಾನದ ಹಿರಿಯ ಅಧಿಕಾರಿಗಳು ಮತ್ತು ಮಾಲೀಕರು ಸುನಕ್ ದಂಪತಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ಬಳಿಕ, ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್) ಆಧ್ಯಾತ್ಮಿಕ ಸ್ವಾಮೀಜಿ ಮಹಂತ್ ಸ್ವಾಮಿ ಮಹಾರಾಜ್ ವಿಶೇಷ ಸಂದೇಶ ನೀಡಿದ್ದರು.
ಬಿಎಪಿಎಸ್ ಹೊರಡಿಸಿದ ಹೇಳಿಕೆಯಲ್ಲಿ, "ಬ್ರಿಟಿಷ್ ಪ್ರಧಾನಿ ಅವರು ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದು 100 ಎಕರೆ ವಿಸ್ತೀರ್ಣದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಕೀರ್ಣವಾಗಿದೆ. ಭಾರತದ ಸಂಪ್ರದಾಯ ಮತ್ತು ಪ್ರಾಚೀನ ವಾಸ್ತುಶಿಲ್ಪ, ಸನಾತನ ಹಿಂದೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನಂಬಿಕೆ, ಭಕ್ತಿ ಮತ್ತು ಸಾಮರಸ್ಯ, ಆಧ್ಯಾತ್ಮಿಕ ಸಂದೇಶವನ್ನು ಉತ್ತೇಜಿಸುತ್ತದೆ. ಮುಖ್ಯ ದೇವಾಲಯದ ಸಂಕೀರ್ಣದಲ್ಲಿ ಸುನಕ್ ಮತ್ತು ಪತ್ನಿ ನಮನ ಸಲ್ಲಿಸಿದರು. ಕಲೆ ಮತ್ತು ವಾಸ್ತುಶಿಲ್ಪವನ್ನು ಮೆಚ್ಚಿಕೊಂಡರು. ಇದಕ್ಕೂ ಮುನ್ನಾ ಶ್ರೀ ನೀಲಕಂಠ ವರ್ಣಿ ಮಹಾರಾಜರ ಮೂರ್ತಿಗೆ ಅಭಿಷೇಕ ನೆರವೇರಿಸಿ ವಿಶ್ವ ಶಾಂತಿ, ಪ್ರಗತಿ ಮತ್ತು ಸೌಹಾರ್ದತೆಗಾಗಿ ಪ್ರಾರ್ಥಿಸಿದರು" ಎಂದು ತಿಳಿಸಿತ್ತು.
'ನನ್ನ ಪತ್ನಿ ಮತ್ತು ನಾನು ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿರುವುದು ಸಂತಸ ನೀಡಿದೆ. ಈ ದೇವಾಲಯದ ಸೌಂದರ್ಯ, ಶಾಂತಿ, ಸೌಹಾರ್ದತೆ ಮತ್ತು ಸಾರ್ವತ್ರಿಕ ಸಂದೇಶಕ್ಕೆ ನಾವು ಬೆರಗಾದೆವು. ಇದು ಪೂಜಾ ಸ್ಥಳ ಮಾತ್ರವಲ್ಲದೇ ಐತಿಹಾಸಿಕ ತಾಣವೂ ಆಗಿದೆ. ಭಾರತದ ಮೌಲ್ಯಗಳು, ಸಂಸ್ಕೃತಿ, ಕೊಡುಗೆಯನ್ನು ಜಗತ್ತಿಗೆ ಪ್ರತಿಬಿಂಬಿಸುತ್ತದೆ' ಎಂದು ಸುನಕ್ ಹೇಳಿಕೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಜಿ20: ದೆಹಲಿಯ ಅಕ್ಷರಧಾಮ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ದಂಪತಿ