ರಾಯಚೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಭ್ರಷ್ಟಾಚಾರ ನಿಗ್ರಹ ಕೇಸ್ ದಾಖಲಿಸಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದ ಗಂಜ್ ಸರ್ಕಲ್ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ದ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ನಾನು ಭ್ರಷ್ಟಾಚಾರ ಮಾಡಲ್ಲ, ಭ್ರಷ್ಟಾಚಾರ ಮಾಡಲು ನಾನು ಬಿಡಲ್ಲ ಅಂತಾ ಹೇಳಿದ್ದರು. ಆದರೆ, ಭ್ರಷ್ಟಾಚಾರ ಕಾರಣಕ್ಕೆ ಗುತ್ತಿಗೆದಾರ ಸಂತೋಷ ಪ್ರಾಣ ಕಳೆದುಕೊಂಡ. ರಾಜ್ಯ ಸರ್ಕಾರದಲ್ಲಿ ಯಾವುದೇ ಖರೀದಿ, ಕಾಮಗಾರಿಗೆ ಶೇ.40ರಷ್ಟು ಕಮಿಷನ್ ಇಲ್ಲದೆ ಕೆಲಸವಾಗಲ್ಲ ಎಂದು ಟೀಕಿಸಿದರು.
ಸಂತೋಷ ಸಾವಿಗೆ ಮುನ್ನ ಸ್ಪಷ್ಟವಾಗಿ ತನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಅಂತಾ ಹೇಳಿದ್ದಾರೆ. ಬಿಜೆಪಿ ಸರ್ಕಾರ ಈ ಪ್ರಕರಣ ಮುಚ್ಚಿ ಹಾಕಲು, ಈಶ್ವರಪ್ಪರನ್ನ ರಕ್ಷಿಸಲು ಮುಂದಾಗಿದೆ. ಹೀಗಾಗಿ, ಭ್ರಷ್ಟಾಚಾರ ನಿಗ್ರಹದ ಕಠಿಣ ಕಾನೂನು ಅಡಿ ಈಶ್ವರಪ್ಪರನ್ನು ಬಂಧಿಸಬೇಕು. ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರರೇ ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದಾರೆ.
ಭ್ರಷ್ಟಾಚಾರದಲ್ಲಿ ನಂ.1 ಅನ್ನೋ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಠ ಮಾನ್ಯ, ದೇವಾಲಯಗಳಿಗೆ ನೀಡುವ ಅನುದಾನದಲ್ಲೂ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಸ್ವಾಮಿಜಿಗಳೇ ಈ ಕಮಿಷನ್ ದಂಧೆ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು. ಪಿಎಸ್ಐ ನೇಮಕಾತಿಯಲ್ಲೂ ಭ್ರಷ್ಟಾಚಾರವಾಗಿದೆ. ತಾತ್ಕಾಲಿಕ ಪಟ್ಟಿ ತಡೆಹಿಡಿದು ತನಿಖೆ ನಡೆಸಬೇಕು ಅಂತಾ ಒತ್ತಾಯ ಮಾಡಿದ್ದೆವು.
ಈಗ ಕಣ್ಣು ಒರೆಸುವ ತಂತ್ರ ಮಾಡಿ ಸಿಐಡಿಗೆ ಕೊಟ್ಟಿದ್ದಾರೆ. ಶೇ.40 ಕಮಿಷನ್ ಬಗ್ಗೆ ತನಿಖೆ ಪಾರದರ್ಶಕವಾಗಿ ನಡೆದರೆ, ಶೇ.90ರಷ್ಟು ಸಚಿವರು ರಾಜೀನಾಮೆ ಕೊಡಬೇಕಾಗುತ್ತೆ ಎಂದರು. ಮೂರು ವರ್ಷದ ಸಾಧನೆ ಬಗ್ಗೆ ಬಿಜೆಪಿ ಶ್ವೇತಪತ್ರ ಹೊರಡಿಸಲಿ. ಭ್ರಷ್ಟಾಚಾರ, ಜಾತಿ, ಧರ್ಮ ಒಡೆಯುವ ಕೆಲಸ ಮಾತ್ರ ಸರ್ಕಾರ ಮಾಡುತ್ತಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು.
ಕೋಮು ಗಲಭೆಯಾದರೆ ಕಾಂಗ್ರೆಸ್‌ಗೆ ನಷ್ಟವಾಗುತ್ತೆ. ಬಿಜೆಪಿ ಕೋಮು ಗಲಭೆ ಸೃಷ್ಟಿಸಿ ಲಾಭಮಾಡಿಕೊಳ್ಳುತ್ತೆ. ಕೋಮು ಗಲಭೆಯಾದರೆ ಹಾನಿಯಾಗುವುದು ಕಾಂಗ್ರೆಸ್‌ಗೆ, ಲಾಭವಾಗುವುದು ಬಿಜೆಪಿಗೆ. ಹೀಗಾಗಿಯೇ, ಬಿಜೆಪಿ ಕೋಮು ಗಲಭೆ ಸೃಷ್ಠಿ ಮಾಡುತ್ತದೆ. ಯಾರೇ ತಪ್ಪು ಮಾಡಲಿ ಅವರಿಗೆ ಶಿಕ್ಷೆಯಾಗಲಿ, ಅಪರಾಧಿ ಯಾರೇ ಆಗಿದ್ರೂ ಅವನು ಅಪರಾಧಿನೇ. ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದರು.
ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಐದು ದಿನಗಳ ಪ್ರತಿಭಟನೆ ನಂತರ ಕಾಂಗ್ರೆಸ್ ಪಕ್ಷದ ಮುಂದಿನ ನಡೆ ಏನು ?