ಲಿಂಗಸುಗೂರು (ರಾಯಚೂರು): ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಡಿವೈಎಸ್ಪಿ ಎಸ್.ಎಸ್ ಹುಲ್ಲೂರು ನೇತೃತ್ವದಲ್ಲಿ ಮಾಸ್ಕ್ ಧರಿಸದ ಸವಾರರಿಗೆ ದಂಡವಿಧಿಸಿ ಜಾಗೃತಿ ಮೂಡಿಸಲಾಯಿತು.
ಲಿಂಗಸುಗೂರು ಬಸ್ ನಿಲ್ದಾಣ ವೃತ್ತದಲ್ಲಿ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಸಹಯೋಗದಲ್ಲಿ ಸಿಬ್ಬಂದಿ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದ ಮಹಿಳೆಯರು, ಮಕ್ಕಳಿಗೂ 200ರೂ. ದಂಡ ವಿಧಿಸಿ ಚುರುಕು ಮೂಡಿಸಿದ್ದು ಕಂಡು ಬಂತು.
ಕೊರೊನಾ ವೈರಸ್ ಹರಡದಂತೆ ತಡೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಸಾಕಷ್ಟು ತಿಳಿ ಹೇಳಿದರು ಜನತೆ ಸ್ಪಂದಿಸುತ್ತಿಲ್ಲ ಅಂತೆಯೆ ಮಾಸ್ಕ್ ಧರಿಸದ ಸವಾರರಿಗೆ ದಂಡ ವಿಧಿಸಿ ಮುನ್ನೆಚ್ಚರಿಕೆ ನೀಡಿದ್ದೇವೆ. ಭವಿಷ್ಯದಲ್ಲಿ ಇದೇ ಸ್ಥಿತಿ ಮುಂದುವರೆದರೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಎಚ್ಚರಿಕೆ ನೀಡಿದರು.
ಲಾಕ್ ಡೌನ್ ಸಡಿಲಿಕೆ ನಂತರದಲ್ಲಿ ಸಾರ್ವಜನಿಕರು ಕೊರೊನಾ ಹರಡದಂತೆ ಎಚ್ಚರಿಕೆ ವಹಿಸುವಲ್ಲಿ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಸಾರ್ವಜನಿಕರ ಆರೋಗ್ಯ ರಕ್ಷಣೆ ಉದ್ದೇಶದಿಂದ ಪೊಲೀಸ್ ಸಿಬ್ಬಂದಿ ಅಧಿಕಾರಿಗಳ ನೇತೃತ್ವದಲ್ಲಿ ದಂಡ ವಿಧಿಸಿ ಮಾಸ್ಕ್ ನೀಡಿ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಹ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹೇಳಿದರು.