ರಾಯಚೂರು: ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಕಾನೂನು ಬಾಹಿರವಾಗಿ ಗೋದಾಮಿನಲ್ಲಿ ಸಂಗ್ರಹಿಸಿದ್ದ 20 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಜಿಲ್ಲೆಯ ಮಾನವಿ ತಾಲೂಕಿನ ಮುದ್ದಾಂಗುಡ್ಡಿ ಸೀಮಾದ ಸರ್ವೇ ನಂ. 52/5ರ ವ್ಯಾಪ್ತಿಯಲ್ಲಿ ಪೋತ್ನಾಳ ಗ್ರಾಮದ ಹನುಮಂತಯ್ಯ ಶೆಟ್ಟಿ ಎನ್ನುವವರ ಮಗ ಗುರುರಾಜ ಶೆಟ್ಟಿ ಅಕ್ರಮವಾಗಿ ಗೋದಾಮಿನಲ್ಲಿ ಸರ್ಕಾರದಿಂದ ವಿತರಣೆ ಮಾಡುವ ಪಡಿತರ ಅಕ್ಕಿ(ಪಿ.ಡಿ.ಎಸ್) ಚೀಲಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಖಚಿತ ಮಾಹಿತಿ ಆಧಾರ ಮೇಲೆ ಪರಿಶೀಲಿಸಿದಾಗ 50 ಕೆಜಿ ತೂಕದ 40 ಚೀಲಗಳಲ್ಲಿ ಸಂಗ್ರಹಿಸಿದ್ದ 20 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿವೆ. ಈ ಅಕ್ಕಿ 30 ಸಾವಿರ ರೂಪಾಯಿ ಮೌಲ್ಯದ್ದಾಗಿದೆ.
ಅಕ್ರಮವಾಗಿ ದಾಸ್ತಾನು ಮಾಡಿದ ಗೋದಾಮಿನಲ್ಲಿ ದಾಳಿ ನಡೆಸಲು ಮುಂದಾದಾಗ ಗೋದಾಮು ಬಳಿಯಿದ್ದ ಹನುಮಂತಯ್ಯ ಶೆಟ್ಟಿ ಹಾಗೂ ಆತನ ಮಗ ಗುರುರಾಜ ಶೆಟ್ಟಿ ಓಡಿ ಹೋಗಿರುವುದು ಕಂಡು ಬಂದಿದೆ. ಪತ್ತೆಯಾಗಿರುವ 20 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮಾನವಿ ತಹಶೀಲ್ದಾರ ನೀಡಿದ ದೂರಿನ ಆಧಾರದ ಮೇಲೆ ಮಾನವಿ ಪೊಲೀಸ್ ಠಾಣೆಯಲ್ಲಿ ಕಲಂ 3 & 7 ಅವಶ್ಯಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿಸುತ್ತಿದ್ದಾರೆ.