ರಾಯಚೂರು : ತಮ್ಮ ವಾಹನಕ್ಕೆ ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ಮಾಡಿ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಬಳಿ ನಡೆದಿದೆ.
ಧಾರವಾಡದಿಂದ ಯಾದಗಿರಿಗೆ ವಾಪಸ್ಸಾಗುತ್ತಿದ್ದ ಬಸ್ ಚಾಲಕ ಸಂಗಮೇಶ ಮತ್ತು ನಿರ್ವಾಹಕ ಲಿಂಗರಾಜ ಅವರ ಮೇಲೆ ಹಲ್ಲೆ ನಡೆದಿದೆ. ತಮ್ಮ ಬೊಲೆರೊ ಜೀಪ್ಗೆ ಬಸ್ ಚಾಲಕ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಬೂಬ ಮತ್ತು ಶರ್ಮುದ್ದೀನ್ ಎಂಬುವರು ಹಲ್ಲೆ ಮಾಡಿದ್ದಾರೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾದ ನಿರ್ವಾಹಕ ಮತ್ತು ಚಾಲಕರು ಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ದೂರು ದಾಖಲಿಸಿದ್ದಾರೆ.