ರಾಯಚೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜನರ ಕುಂದು ಕೊರತೆ ಕೇಳುವುದಾಗಿ ಗ್ರಾಮ ವಾಸ್ತವ್ಯ ಮಾಡುತ್ತೇವೆ ಎಂದು ಮನವಿ ಕೊಡಲು ಹೋದವರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸುತ್ತಾರೆ ಎಂದು ಏಕವಚನದಲ್ಲಿಯೇ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಶಿವನಗೌಡ ನಾಯಕ ಕಿಡಿಕಾರಿದ್ದಾರೆ.
ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಕೈಗೊಂಡ ಕರೇಗುಡ್ಡದವರೆಗೆ ಜನರ ಕುಂದು ಕೊರತೆ ತೆಗೆದುಕೊಂಡು ದೇವದುರ್ಗ ಶಾಸಕ ಶಿವನಗೌಡ ನಾಯಕ ನೇತೃತ್ವದಲ್ಲಿ ಬುಧವಾರ ಪಾದಯಾತ್ರೆ ಕೈಗೊಳ್ಳಲಾಗಿತ್ತು.
ತಂದೆ, ಮಕ್ಕಳು ಸೇರಿ ರಾಜ್ಯದಲ್ಲಿ ತುಂಡು ಗುತ್ತಿಗೆ ನೀಡಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆದವರು ಸಾರ್ವಜನಿಕರ ಸಮಸ್ಯೆ ಆಲಿಸುವ ಬದಲು ಅವರನ್ನೇ ನಿಂದಿಸುವುದು ಯಾವ ನ್ಯಾಯವೆಂದು ದೇವೇಗೌಡ ಹಾಗೂ ಕುಮಾರಸ್ವಾಮಿಯವರನ್ನು ಪದೇ ಪದೆ ಏಕ ವಚನದಿಂದಲೇ ಶಾಸಕ ಶಿವನಗೌಡ ಕುಟುಕಿದರು.
ಗ್ರಾಮದಿಂದ 6 ಕಿ.ಮೀ. ದೂರದ ಬಸವಣ್ಣ ಕ್ಯಾಂಪ್ ಹತ್ತಿರದ ಹೊಲದಲ್ಲಿ ಶಾಸಕರೊಂದಿಗೆ ಪೊಲೀಸರು ಮಾತನಾಡಿ, 10 ಜನರಿಗೆ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ನೀಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೆ ಒಪ್ಪದೇ ಗ್ರಾಮಸ್ಥರು, ಕಾರ್ಯಕರ್ತರು ಮುನ್ನುಗ್ಗಿದ್ದರಿಂದ ಶಾಸಕರನ್ನು ಒಳಗೊಂಡಂತೆ ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.
ಜನರ ಸಮಸ್ಯೆಗಳನ್ನು ಕೇಳಲು ಬಂದಿರುವ ಸಿಎಂ, ಮಾರ್ಗ ಮಧ್ಯೆ ನಮ್ಮನ್ನು ಬಂಧಿಸಿರುವುದು ಖಂಡನೀಯ. ಬಲ್ಲಟಗಿಯಿಂದ ಮುಖ್ಯಮಂತ್ರಿಗಳ ಬಳಿ ಕುಂದು ಕೊರತೆ ಹೇಳಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಹೊರಟಿದ್ದೆವು ಎಂದು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.