ರಾಯಚೂರು: ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಗೌರಿ ಮೀಡಿಯಾ ಟ್ರಸ್ಟ್ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ.
ನಗರದ ಅಂಬೇಡ್ಕರ್ ಸರ್ಕಲ್ ಬಳಿ ಮನರಂಜನಾ ಕೇಂದ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಳೆದ ವರ್ಷದ ಅಕ್ಟೋಬರ್ 24ರಂದು ಬಂದಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು. 18 ವರ್ಷಗಳ ಹಳೆಯ ಪ್ರಕರಣ ಸಂಬಂಧ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇಮದು ಜೈಲಿನಿಂದ ಹೊರಬರುತ್ತಿದ್ದಂತೆ, ಅವರ ಸ್ನೇಹಿತರು, ಹಿತೈಷಿಗಳು, ಸಂಘಟನೆ ಮುಖಂಡರು ಹಾಗೂ ಬೆಂಬಲಿಗರು ಹೂವಿನ ಮಾಲೆ ಹಾಕುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ನರಸಿಂಹಮೂರ್ತಿ, ನನ್ನನ್ನು ಬಂಧಿಸಿ, ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಸಂಚು ರೂಪಿಸಲಾಗಿದೆ. ಈ ರೀತಿ ದಮನಕಾರಿ ಪ್ರಯತ್ನದಿಂದ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಬಡವರ ಪರ ನನ್ನ ಹೋರಾಟ ಮುಂದುವರಿಯಲಿದೆ ಎಂದು ಗುಡುಗಿದರು.