ರಾಯಚೂರು: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ವಿದ್ಯಾವಂತರಿಗೆ ಉದ್ಯೋಗ ಒದಗಿಸುವಲ್ಲಿ ನಮ್ಮನ್ನು ಆಳುವ ಸರ್ಕಾರಗಳು ಸಂಪೂರ್ಣ ವಿಫಲರಾಗಿದ್ದು, ಕೂಡಲೇ ನಿರುದ್ಯೋಗಿ ಯುವಕರಿಗೆ ನಿರುದ್ಯೋಗಿ ವೇತನ ಭತ್ಯ ನೀಡಬೇಕು ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಮಾಜಿ ರಾಜ್ಯಾಧ್ಯಕ್ಷ ಮಹೀಂದ್ರ ಕುಮಾರ್ ಮೀತ್ರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 70 ವರ್ಷಗಳಿಂದ ರಾಜ್ಯವನ್ನು ಆಳಿದ ವಿವಿಧ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಭಾರತೀಯ ಸಂವಿಧಾನದ ಭಾಗ 4 ರಾಜನಿರ್ದೇಶನ ತತ್ವಗಳನ್ನು ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಕಾರಣ ರಾಜ್ಯದಲ್ಲಿ ಬಡವರು, ಕಡುಬಡವರು ಹಾಗೂ ನಿಗರ್ತಿಕರ ಸಂಖ್ಯೆ ಹೆಚ್ಚಾಗಿದೆ ಎಂದರು.
ಸಮಾಜಿಕ ಭದ್ರತಾ ಯೋಜನೆ, ವೃದ್ಧಾಪ್ಯದ ವೇತನ ಯೋಜನೆಯಡಿ ವೈಯೋವೃದ್ದರಿಗೆ ಪಂಚಣಿ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಶಾಸನೆ, ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ, ಅಂಗವಿಕಲರಿಗೆ ಮಾಶಾಸನ, ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಇತರರಿಗೆ ಮಾಶಾಸನ ನೀಡಲಾಗುತ್ತದೆ. ಆದರೆ ನಿರುದ್ಯೋಗಿ ಯುವಕರಿಗೆ ಯಾವುದೇ ವೇತನ ಭತ್ಯೆ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಎಲ್ಲಿಯವರೆಗೆ ಸಾರ್ಕಾರಿ ಉದ್ಯೋಗ ಸೃಷ್ಟಿಸುವುದಿಲ್ಲವೋ, ಅಲ್ಲಿಯವರೆಗೆ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತದೆ. ಹೀಗಾಗಿ ಕೂಡಲೇ ಸರ್ಕಾರ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ನಿರುದ್ಯೋಗಿಗಳ ಜಾತಿಯನ್ನು ನೋಡದೆ ಅವರ ವಿದ್ಯಾರ್ಹತೆ ಮೇಲೆ ನಿರುದ್ಯೋಗಿ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.