ರಾಯಚೂರು: ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದೆ.
ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಏಕಲವ್ಯ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾಡಳಿತದಿಂದ ನಿರ್ಮಿಸಲಾಗಿರುವ ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದ 28 ವರ್ಷದ P-1,375 ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೇ 14 ರಂದು ಮಹಾರಾಷ್ಟ್ರದ ಸೋಲಾಪುರದಿಂದ ಜಿಲ್ಲೆಗೆ ಬಂದಿದ್ದರು. ಆ ದಿನ ಕೋವಿಡ್-19 ತಪಾಸಣೆ ಮಾಡಿ, ಕೊತ್ತದೊಡ್ಡಿ ಗ್ರಾಮದಲ್ಲಿನ ಏಕಲವ್ಯ ವಿದ್ಯಾರ್ಥಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಒಪೆಕ್ನಲ್ಲಿರುವ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಇನ್ನು ಇಂದು 314 ಜನರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಕೋವಿಡ್-19 ಫಲಿತಾಂಶಕ್ಕಾಗಿ ಕಳುಹಿಸಲಾಗಿದ್ದ ಮಾದರಿಗಳಲ್ಲಿ ಇಂದು 409 ವರದಿಗಳು ನೆಗೆಟಿವ್ ಬಂದಿದ್ದು, ಒಂದು ಪ್ರಕರಣ ಪಾಸಿಟಿವ್ ಎಂದು ದೃಢಪಟ್ಟಿದೆ. ಜಿಲ್ಲೆಯಿಂದ ಈ ವರೆಗೆ 4,411 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ರವಾನಿಸಲಾಗಿದ್ದು, 3,275 ವರದಿಗಳು ನೆಗೆಟಿವ್ ಬಂದಿದೆ. ಇನ್ನುಳಿದ 1,131 ಜನರ ಫಲಿತಾಂಶ ಬರುವುದು ಬಾಕಿಯಿದೆ. ಫಿವರ್ ಕ್ಲಿನಿಕ್ಗಳಲ್ಲಿಂದು 489 ಜನರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ.
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 4,933 ಜನರಿದ್ದು, ಸಿಂಧನೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 585, ಮಾನವಿ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 1,639, ದೇವದುರ್ಗ ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 1,791, ಲಿಂಗಸುಗೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 873 ಜನರು ಸೇರಿದಂತೆ 9,821 ಜನರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಜಿಲ್ಲೆಯಲ್ಲಿ ಮೊದಲು ಪತ್ತೆಯಾಗಿದ್ದ 6 ಕೊರೊನಾ ಸೋಂಕಿತ ವ್ಯಕ್ತಿಗಳೊಂದಿಗೆ ಪ್ರಾಥಮಿಕ ಹಂತದಲ್ಲಿ 74, ದ್ವಿತೀಯ ಹಂತದಲ್ಲಿ 295 ಜನ ಸಂಪರ್ಕ ಹೊಂದಿದ್ದು, ಇವರನ್ನ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.