ರಾಯಚೂರು/ ಕಾರವಾರ: ಅಂಗನವಾಡಿಯಲ್ಲೇ ಎಲ್.ಕೆ.ಜಿ, ಯುಕೆಜಿ ಪ್ರಾರಂಭಿಸುವುದು, ಅಂಗನವಾಡಿ ನೌಕರರ ಕೆಲಸವನ್ನು ಅಧಿಕೃತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರವಾರ ಹಾಗೂ ರಾಯಚೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ.
ಕಾರವಾರದಲ್ಲಿ ಆಶಾ ಕಾರ್ಯಕರ್ತೆಯರು ಅಖಿಲ ಭಾರತ ಅಂಗನವಾಡಿ ನೌಕರರ ಸಂಘ ದೇಶವ್ಯಾಪಿ ಕರೆಕೊಟ್ಟಿದ್ದ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರದ ಮಿತ್ರಸಮಾಜದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆ ಮತ್ತು ಆಹಾರ ಹಕ್ಕು ಕಾಯ್ದೆಯಡಿ ಭಾರತ ಕಾರ್ಮಿಕ ಸಮ್ಮೇಳನದ ಶಿಫಾರಸ್ಸು ಜಾರಿ ಮಾಡಿ ಅಂಗನವಾಡಿಯಲ್ಲೇ ಎಲ್.ಕೆ.ಜಿ ಯುಕೆಜಿ ಯನ್ನು ಪ್ರಾರಂಭಿಸಬೇಕು. ಮಾತೃಪೂರ್ಣ ಯೋಜನೆ ಕೆಲಸಕ್ಕೆ ಓರ್ವ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಿಕೊಳ್ಳಬೇಕು. ಈಗಿರುವ ಸಹಾಯಕಿಯು ಅಂಗನವಾಡಿ ಕೇಂದ್ರದ ದಿನನಿತ್ಯದ ಕೆಲಸಗಳನ್ನು ಮಾಡುತ್ತಾರೆ. ಆಗ ಕಾರ್ಯಕರ್ತೆಯು ಶಾಲಾಪೂರ್ವ ಶಿಕ್ಷಣಕ್ಕೆ ಮೊದಲಿಗಿಂತ ಹೆಚ್ಚು ಆದ್ಯತೆ ಕೊಟ್ಟು ಕಲಿಸುತ್ತಾರೆ. ಐಸಿಡಿಎಸ್ ಯೋಜನೆಯದಲ್ಲದ ಯಾವುದೇ ಹೆಚ್ಚುವರಿ ಕೆಲಸಗಳನ್ನು ಅಂಗನವಾಡಿ ನೌಕರರಿಗೆ ವಹಿಸಬಾರದು ಎಂದು ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಅಂಗನವಾಡಿ ಸಹಾಯಕರ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಬೇಕು ವಾರಕ್ಕೊಮ್ಮೆ ಕೇಂದ್ರಗಳಿಗೆ ಮೊಟ್ಟೆಗಳನ್ನು ಕೊಡಿಸಬೇಕು ಹಾಗೂ ಗ್ಯಾಸ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ.