ರಾಯಚೂರು: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಮತ ಏಣಿಕೆ ಕಾರ್ಯಕ್ಕೆ ಜಿಲ್ಲಾಡಳಿತ ಸಕಲ ರೀತಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್ ಚಂದ್ರಶೇಖರ ನಾಯಕ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಸ್‌ಆರ್‌ಪಿಎಸ್ ಪಿಯು ಕಾಲೇಜು, ಎಲ್‌ವಿಡಿ ಡಿಗ್ರಿ ಕಾಲೇಜಿನಲ್ಲಿ ಮತಏಣಿಕೆ ಕಾರ್ಯ ನಡೆಯಲಿದೆ. ರಾಯಚೂರು ಗ್ರಾಮೀಣ, ರಾಯಚೂರು ನಗರ, ಮಾನವಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯನ್ನು ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ, ದೇವದುರ್ಗ, ಲಿಂಗಸೂಗೂರು, ಸಿಂಧನೂರು ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಎಲ್‌ವಿಡಿ ಡಿಗ್ರಿ ಕಾಲೇಜಿನಲ್ಲಿ ನಡೆಯಲಿದೆ ಎಂದು ಹೇಳಿದರು.
ರಾಯಚೂರು ನಗರ, ರಾಯಚೂರು ಗ್ರಾಮಾಂತರ, ಮಾನವಿ, ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 61 ಜನ ಅಭ್ಯರ್ಥಿಗಳು ಅಖಾಡದಲ್ಲಿ ಇದ್ದಾರೆ ಎಂದು ಹೇಳಿದರು. ಮೇ. 10 ರಂದು ನಡೆದ ಮತದಾನದಲ್ಲಿ ಜಿಲ್ಲೆಯಾದ್ಯಂತ ಶೇ. 70 .03% ರಷ್ಟು ಮತದಾನವಾಗಿದೆ. ಏಳು ಕ್ಷೇತ್ರಗಳಲ್ಲಿ, ರಾಯಚೂರು ಗ್ರಾಮಾಂತರದಲ್ಲಿ ಶೇ.75.30 ರಷ್ಟಾದರೆ, ರಾಯಚೂರು ನಗರದಲ್ಲಿ ಶೇ. 62.01 ರಷ್ಟು ಮತದಾನವಾಗಿದೆ. ಜಿಲ್ಲೆಯ ಒಟ್ಟು 16,34,989 ಮತದಾರರಿದ್ದಾರೆ. ಇದರಲ್ಲಿ ಪುರುಷರು 8,05,594 ಮಹಿಳೆಯರು 8,29,133 ಹಾಗೂ ಇತರ 263 ಮತದಾರರು ಇದ್ದಾರೆ. ಈ ಪೈಕಿ 5,80,388 ಪುರುಷರು, 5,64,532 ಮಹಿಳೆಯರು ಹಾಗೂ ಇತರೆ 23 ಮತದಾರರು ತಮ್ಮ ಮತದಾನ ಹಕ್ಕನ್ನು ಚಲಾಯಿಸುವ ಮೂಲಕ ಜಿಲ್ಲೆಯ ಸರಾಸರಿ ಶೇ.70.03 ಮತದಾನವಾಗಿದೆ ಎಂದು ತಿಳಿಸಿದರು.
ನಾಳೆ ನಡೆಯುವ ಮತದಾನ ಏಣಿಕೆ ಕಾರ್ಯಕ್ಕೆ ಒಟ್ಟು 378 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 14 ಟೇಬಲ್‌ಗಳು, 18 ಮತ ಎಣಿಕೆ ಸೂಪರ್ ವೈಜರ್ಸ್, ಮತಏಣಿಕೆ ಸಹಾಯಕರು, ಮತ ಎಣಿಕೆ ವೀಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಸ್ಟ್ರಾಂಗ್ ರೂಮ್‌ನಿಂದ ಮತ ಯಂತ್ರಗಳನ್ನು ತೆಗೆದುಕೊಂಡ ಮತ ಎಣಿಕೆ ಕೇಂದ್ರ ತರಲು ಗ್ರಾಮ ಸಹಾಯಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆ ಜಾರಿ: ಜಿಲ್ಲಾದ್ಯಂತ ಕಾನೂನು ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಸಂಭ್ರಮಾಚರಣೆ, ಪಟಾಕಿ ಹೊಡೆಯುವುದು ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಮತ ಎಣಿಕೆಯಲ್ಲಿ ಸೂಕ್ತವಾದ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಎಣಿಕೆ ಕೇಂದ್ರ ಸುತ್ತಲು ಕಾರ್ಯಕ್ಕಾಗಿ ಎಸ್ಪಿ, ಎಎಸ್‌ಪಿ, ಡಿವೈಎಸ್ಪಿ-2, ಪಿಐ/ಸಿಪಿಐ-12, ಪಿಎಸ್‌ಐ-25, ಎಎಸ್‌ಐ-52, ಹೆಚ್‌ಸಿ/ಪಿಸಿ-350, ಹೋಮ್ಗಾರ್ಡ್-100, ಕೇಂದ್ರ ಸಶಸ್ತ್ರ ಮೀಸಲು ಪಡೆ-3, ಕೆಎಸ್‌ಆರ್‌ಪಿ ತುಕಡಿಗಳು-2, ಜಿಲ್ಲಾ ಸಶಸ್ತ್ರ ಮೀಸಲು ತುಕಡಿಗಳು-2 ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ: 7 ವಿಧಾನಸಭಾ ಕ್ಷೇತ್ರಗಳಿಗೆ ವ್ಯಾಪ್ತಿಯಲ್ಲಿ ಸ್ಥಳೀಯ ಬಂದೋ ಬಸ್ತ್‌ಗಾಗಿ 10-ಕೇಂದ್ರ ಸಶಸ್ತ್ರ ಮೀಸಲು ಪಡೆ, 8-ಕೆಎಸ್‌ಆರ್‌ಪಿ ತುಕಡಿ, 8-ಜಿಲ್ಲಾ ಸಶಸ್ತ್ರ ಮೀಸಲು ಪಡೆ, 100-ಹೋಮ್ಗಾರ್ಡ್ ಹಾಗೂ ಸಂಪೂರ್ಣ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಮಸ್ಕಿ ಪಟ್ಟಣದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್ ಬಸವನಗೌಡ ತುರುವಿಹಾಳ ಸಹೋದರ ಸಿದ್ದನಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಯಾವುದೇ ದೂರು ಬರದೆ ಇರದ ಹಿನ್ನೆಲೆ ಇಲಾಖೆಯಿಂದ ಸುಮೋಟೋ ಪ್ರಕರಣ ದಾಖಲಿಸಲಾಗಿದೆ. 12 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ