ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಖಂಡಿಸಿ ಸಾಕಷ್ಟು ಜನರು ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಕೂಡಾ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ನಟಿ ಹರ್ಷಿಕಾ ಪೂಣಚ್ಚ ವಿದ್ಯಾರ್ಥಿನಿ ಹತ್ಯೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇಂದು ರಾಯಚೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಭಾಗವಹಿಸಿದ್ದರು. ರಾಯಚೂರಿನ ಮಾರ್ನಿಕ್ ಪ್ರಭುದೇವ ವೃತ್ತದಿಂದ ಡಿಸಿ ಕಚೇರಿವರೆಗೂ ನಡೆದ ಬೃಹತ್ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಹರ್ಷಿಕಾ ನಂತರ ಡಿಸಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಹರ್ಷಿಕಾ ಜೊತೆ ಬಿಗ್ಬಾಸ್ ಖ್ಯಾತಿಯ ಭುವನ್ ಸಾಥ್ ನೀಡಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಹರ್ಷಿಕಾ, ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರಿಗೆ ನ್ಯಾಯ ಸಿಗಬೇಕು. ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಂತೆ ಡಿಸಿ ಭರವಸೆ ನೀಡಿದ್ದಾರೆ. ಇಂತಹ ಹೀನ ಕೃತ್ಯಗಳು ನಿಲ್ಲಬೇಕು. ನಮ್ಮ ಹೆಣ್ಣುಮಕ್ಕಳು ಮನೆಯಿಂದ ಹೊರಬರಬೇಕಾದರೆ ಹೆದರಿ ಬರುವಂತಹ ಸನ್ನಿವೇಶ ದೂರವಾಗಬೇಕು. ಆದಷ್ಟು ಬೇಗ ಅಪರಾಧಿಗಳಿಗೆ ಹಾಗೂ ಸಹಕಾರ ನೀಡಿದವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು. ಈ ರ್ಯಾಲಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದು, ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.