ನವರಸನಾಯಕ ಜಗ್ಗೇಶ್ ರಾಯಚೂರಿನ ಮಂತ್ರಾಲಯದಲ್ಲಿ ಇಂದು ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪ್ರತಿವರ್ಷ ತಮ್ಮ ಹುಟ್ಟುಹಬ್ಬದಂದು ತಪ್ಪದೆ ನಟ ಜಗ್ಗೇಶ್ ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಗ್ಗೇಶ್, ನನಗೆ ಏನೂ ಇಲ್ಲದ ದಿನದಿಂದಲೂ ಸುಮಾರು 1980 ರಿಂದ ಪ್ರತಿ ವರ್ಷ ಮಂತ್ರಾಲಯಕ್ಕೆ ಬರುತ್ತಿದ್ದೇನೆ. ಇಂದು ನಾನು ಏನಾದರೂ ಸಂಪಾದಿಸಿದ್ದರೆ ಅದು ರಾಯರ ಕೃಪೆಯಿಂದ ಮಾತ್ರ. ಮೊದಲು ಎಲ್ಲರಂತೆ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಆದರೆ ನನ್ನ ತಂದೆ ನಿಧನರಾದಾಗಿನಿಂದ ಮಂತ್ರಾಲಯಕ್ಕೆ ಬರುವ ಪ್ರತೀತಿ ಇದೆ. ಗುರುರಾಯರೇ ನನಗೆ ತಾಯಿ ತಂದೆ ಎಲ್ಲಾ ಆಗಿದ್ದಾರೆ ಎಂದರು.
ಮಂಡ್ಯದಿಂದ ಸುಮಲತಾ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯ ಹೊರತುಪಡಿಸಿ ಅಂಬರೀಶ್ ಅವರ ಜೊತೆ 30 ವರ್ಷಗಳ ಸಂಬಂಧವಿದೆ. ಯಾವತ್ತೂ ಕೂಡಾ ಅವರ ಕುಟುಂಬಕ್ಕೆ ಒಳಿತನ್ನೇ ಬಯಸುತ್ತೇನೆ. ಸುಮಲತಾ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಅಂಬರೀಶ್ ಸಾಧನೆ, ಜನರ ಪ್ರೀತಿ ಸುಮಲತಾ ಅವರ ಕೈ ಹಿಡಿಯುತ್ತೆ ಎಂದರು.
ಇನ್ನು ರಾಜಕಾರಣದ ಬಗ್ಗೆ ಮಾತನಾಡಿದ ಅವರು ನಟರು ಊಟಕ್ಕಾಗಿ ಬಣ್ಣಹಚ್ಚಿದರೆ ಕೆಲವು ರಾಜಕಾರಣಿಗಳು ಓಟಿಗಾಗಿ ಬಣ್ಣ ಹಚ್ಚುತ್ತಾರೆ. ಬಣ್ಣ ಹಚ್ಚಿಕೊಳ್ಳುವ ರಾಜಕಾರಣಿಗಳ ಬಣ್ಣವನ್ನು ಜನರೇ ತೆಗೆಯುತ್ತಾರೆ. ನಾನೂ ರಾಜಕಾರಣಿಯಾಗಿ ಬಹಳಷ್ಟು ರಾಜಕಾರಣಿಗಳು ಜನರ ನಂಬಿಕೆಯನ್ನು ಕೆಡಿಸಿಕೊಂಡಿದ್ದೇವೆ. ಅದರಲ್ಲಿ ಯಾರು ಉತ್ತಮರು ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದು ಹೇಳಿದರು.