ರಾಯಚೂರು: ಮರಳು ಸಾಗಣೆಯ ರಾಜಧನ (ರಾಯಲ್ಟಿ) ಮುದ್ರಣ ಮಾಡುತ್ತಿದ್ದ ಮೆಡಿಕಲ್ ಶಾಪ್ ಮೇಲೆ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಓದಿ: ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧಾರ: ಸಿದ್ದರಾಮಯ್ಯ
ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಭರತ್ ಕುಮಾರ್, ಸಿದ್ದಲಿಂಗ ರೆಡ್ಡಿ, ಚನ್ನನಗೌಡ ಎಂಬುವವರಿಗೆ ಸೇರಿದ ಮೆಡಿಕಲ್ ಶಾಪ್ ಮೇಲೆ ದಾಳಿ ನಡೆಸಿ ಸುಮಾರು 40 ಲಕ್ಷ ರೂ. ಮೌಲ್ಯದ 307 ರಾಯಲ್ಟಿ ಪತ್ರಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಆರೋಪಿ ಸಿದ್ದಲಿಂಗ ರೆಡ್ಡಿಯನ್ನು ಬಂಧಿಸಲಾಗಿದೆ.
ರಾಜಧನ (ರಾಯಲ್ಟಿ) ದುರ್ಬಳಕೆ ಮಾಡಿಕೊಂಡು ಸರ್ಕಾರಿ ಖಜಾನೆಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಕೊಪ್ಪಳ, ಗದಗ ಜಿಲ್ಲೆಯ ಅಧಿಕಾರಿಗಳ ಹೊಂದಾಣಿಕೆಯಲ್ಲಿ ಪಡೆದು, ಖಾಲಿ ಜಮೀನಿನ ಮರಳು ಸಾಗಣೆ ರಾಯಲ್ಟಿ ಬಳಸಿ ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ಸಾಗಣಿಕೆ ಮಾಡುವ ಮೂಲಕ ವಂಚನೆ ಮಾಡುತ್ತಿದ್ದರಂತೆ.
ಶಶಿಕಾಂತ್ ಎಸ್. ವಡ್ಡರ್, ಶರಣಬಸಪ್ಪ, ಯಲ್ಲಪ್ಪ, ಎಂಎಂ ಬಳ್ಳಾರಿ ಅಕ್ರಮ ಮರಳು ಸಾಗಣಿಕೆ ಮಾಡುತ್ತಿರುವ ಗುತ್ತಿಗೆದಾರರಾಗಿದ್ದಾರೆ ಎನ್ನಲಾಗಿದೆ. ಈ ಅಕ್ರಮದ ಕುರಿತಂತೆ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.