ರಾಯಚೂರು: ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಯ ವಿಶೇಷ 351ನೇ ಆರಾಧನಾ ಮಹೋತ್ಸವ ಉತ್ತರಾಧನೆಯು ಭಾನುವಾರ ಸಂಭ್ರಮದಿಂದ ನಡೆಯಿತು. ಮಠದ ಬೀದಿಯಲ್ಲಿ ನಡೆದ ಮಹಾರಥೋತ್ಸವವು ಉತ್ತರಾಧನೆಯ ವಿಶಿಷ್ಟ ಆಕರ್ಷಣೆಯಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ಮಹಾರಥೋತ್ಸವದಲ್ಲಿ ಭಾಗವಹಿಸಿ ರಾಯರ ಆರಾಧನೆಗೆ ಮೆರಗು ತಂದವು.
ಬೆಳಗ್ಗೆಯಿಂದಲೇ ನಿರ್ಮಲ ವಿಸರ್ಜನೆ ಮೂಲಕ ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ಬೃಂದಾವನದ ಅಲಂಕಾರ ಸೇವೆಯೊಂದಿಗೆ ಪೀಠಾಧ್ಯಕ್ಷ ಸುಭುದೇಂದ್ರ ತೀರ್ಥರು ರಾಯರ ಉತ್ತರಾಧನೆಗೆ ಚಾಲನೆ ನೀಡಿದರು. ವಿಶೇಷ ಪುಷ್ಪಾಲಂಕರ ಮಾಡಲಾಗಿತ್ತು. ಮೂಲ ರಾಮದೇವರಿಗೆ ಪ್ರಾರ್ಥನೆ ಸಲ್ಲಿಸಿದ ಶ್ರೀಗಳು ಪ್ರಹ್ಲಾದ ರಾಯರಿಗೆ ಗಂಧ ಲೇಪಿಸುವ ಮೂಲಕ ಹೋಳಿ ಆಚರಿಸಿದರು. ಗಂಧವನ್ನ ಚಿಮಿಕಿಸುವ ಮೂಲಕ ಭಕ್ತರೂ ಕೂಡ ಹೋಳಿಯಲ್ಲಿ ಮಿಂದೆದ್ದರು.
ಪ್ರಹ್ಲಾದರಾಜರಾಗಿ ರಾಯರು ಭಕ್ತರಿಗೆ ಬಹಿರ್ಮುಖವಾಗಿ ಇಂದು ದರ್ಶನ ಕೊಡುತ್ತಾರೆ ಎಂಬ ನಂಬಿಕೆಯಿದೆ. ಪ್ರಹ್ಲಾದರಾಜರಿಗೆ ಶ್ರೀಗಳು ಹೋಳಿ ಹಾಕುವ ಮೂಲಕ ಪಾರ್ಥನೆ ಸಲ್ಲಿಸಿದರು. ಮಹಾರಥೋತ್ಸವಕ್ಕೂ ಮುನ್ನ ವಿದ್ಯಾಪೀಠಕ್ಕೆ ರಥದಲ್ಲಿ ತೆರಳುವ ಉತ್ಸವ ಮೂರ್ತಿ ಪ್ರಹ್ಲಾದರಾಜರು ವಿದ್ಯಾಪೀಠದಲ್ಲಿ ನಡೆಯುವ ಸಂಸ್ಕೃತಾಭ್ಯಾಸವನ್ನ ಪರಿಶೀಲಿಸುತ್ತಾರೆ ಎಂಬುದು ಇಲ್ಲಿನ ಪ್ರತೀತಿ.
ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ.. ಚಿನ್ನದ ರಥೋತ್ಸವದಲ್ಲಿ ಭಾಗಿಯಾದ ಭಕ್ತರು
ತದನಂತರ ರಥಬೀದಿಗೆ ಬಂದು ಪ್ರಲ್ಲಾದರಾಜರನ್ನು, ಹೂವಿನಿಂದ ಶೃಂಗಾರಗೊಂಡಿದ್ದ ರಥವನ್ನೇರಿ, ಪೂಜೆ ಪುನಸ್ಕಾರಗಳನ್ನು ಮಾಡಿದ ಶ್ರೀಗಳು ನೆರೆದಿದ್ದ ಸಹಸ್ರಾರು ಭಕ್ತರಿಗೆ ಅನುಗ್ರಹ ಸಂದೇಶವನ್ನು ನೀಡಿ, ಚಾಲನೆ ನೀಡಿದರು. ರಥಬೀದಿಯಲ್ಲಿ, ರಥ ಮಧ್ಯದಲ್ಲಿ ಬಂದಾಗ ಹೆಲಿಕಾಪ್ಟರ್ ಮೂಲಕ ಬಂದ ಶ್ರೀಗಳು ರಥಕ್ಕೆ ಮತ್ತು ಮಠದ ಶಿಖರಗಳಿಗೆ ಪುಷ್ಪವೃಷ್ಟಿ ನಡೆಸಿದರು. ಸಂಜೆ ವೇಳೆ ಸ್ವಸ್ತಿವಾಚನ ಹಾಗೂ ಮಹಾಮಂಗಳಾರತಿಯೊಂದಿಗೆ ಉತ್ತರಾಧನೆಯ ಕಾರ್ಯಕ್ರಮ ಅಂತ್ಯಗೊಂಡಿತು. ಸಪ್ತರಾತ್ರೋತ್ಸವ ಇನ್ನೂ ಎರಡು ದಿನ ಕಾಲ ನಡೆಯಲಿದೆ.