ರಾಯಚೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಯಚೂರ ಅಥವಾ ಸಿಂಧನೂರಿನಿಂದ ಸ್ಪರ್ಧಿಸಿದರೆ ತಮ್ಮ ಪಾಲಿಗೆ ಸೇರಿರುವ ಎರಡು ಎಕರೆ ಜಮೀನನ್ನು ಮಾರಿ ಅದರಿಂದ ಬರುವ ಹಣವನ್ನು ಸಿದ್ದರಾಮಯ್ಯರ ಚುನಾವಣಾ ಕಾರ್ಯಕ್ಕೆ ನೀಡುವುದಾಗಿ ಬಿಸಿಲು ನಾಡಿನ ಅಭಿಮಾನಿಯೊಬ್ಬರು ಡಿಫರೆಂಟ್ ಆಗಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದ್ದಾರೆ.
ಚುನಾವಣಾ ಕಾರ್ಯಕ್ಕೆ ಹಣ ನೀಡುವೆ.. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸೂರು ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯನೂ ಆಗಿರುವ ಸಿದ್ದರಾಮಯ್ಯ ಅಭಿಮಾನಿ ಶರಣು ಕಡ್ಡೋಣಿ ಅವರು ಈ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ರಾಯಚೂರು ಅಥವಾ ಸಿಂಧನೂರು ಕ್ಷೇತ್ರಗಳ ಪೈಕಿ ಯಾವುದಾದರು ಒಂದರಿಂದ ಸ್ಪರ್ಧಿಸಿದರೆ ತನ್ನ ಪಾಲಿನ 2 ಎಕರೆ ಜಮೀನನ್ನು ಮಾರಿ ಅದರಿಂದ ಬರುವ ಹಣವನ್ನು ಚುನಾವಣಾ ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದ್ದಾರೆ.
50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ.. ಅಲ್ಲದೇ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರು ಅಭಿವೃದ್ಧಿ ಹೊಂದಬೇಕಾದರೇ ಸಿದ್ಧರಾಮಯ್ಯ ಅವರು ರಾಯಚೂರು ನಗರ ಅಥವಾ ಸಿಂಧನೂರು ಈ ಎರಡು ಕ್ಷೇತ್ರಗಳ ಪೈಕಿ ಯಾವುದಾದರು ಒಂದರಿಂದ ಕಣಕ್ಕಿಳಿಯಬೇಕು. ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಸಿದ್ದರಾಮಯ್ಯ ಜಯಿಸಲಿದ್ದಾರೆ. ಇದರಿಂದ ನಮ್ಮ ಜಿಲ್ಲೆಯ ಎಲ್ಲಾ ಕ್ಷೇತ್ರಗಳು ಅಭಿವೃದ್ಧಿ ಹೊಂದತ್ತವೆ ಎಂದು ವಿಡಿಯೋ ಮೂಲಕ ಅಭಿಮಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಫೇಸ್ಬುಕ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಸಹ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿದ್ಧರಾಮಯ್ಯ ಅಭಿಮಾನಿಗಳು ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು, ಸಿದ್ಧರಾಮಯ್ಯ ಅವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ, ಕ್ಷೇತ್ರ ಬದಲಾವಣೆ ಬಯಸಿ, ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲಗಳು ಮೂಡಿದ್ದವು. ಅಲ್ಲದೇ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ರಾಜ್ಯ ರಾಜಕೀಯದಲ್ಲೂ ಚರ್ಚೆಗಳು ನಡೆದಿದ್ದವು. ಈ ಎಲ್ಲಾ ಕುತೂಹಲಕ್ಕೆ ಸಿದ್ದರಾಮಯ್ಯ ತೆರೆ ಎಳೆದು ತಾವು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಗೊಂದಲಗಳಿಗೆ ಪೂರ್ಣವಿರಾಮ ಇಟ್ಟಿದ್ದರು.
ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಸಿದ್ದರಾಯ್ಯರಿಗೆ ಆಹ್ವಾನವಿಟ್ಟಿದ್ದರು. ಬಾದಾಮಿ ಕ್ಷೇತ್ರದಿಂದಲೇ ಮತ್ತೇ ಸಿದ್ದರಾಮಯ್ಯ ಸ್ಪರ್ಧಿಸಬೇಕು ಎಂದು ಅಲ್ಲಿಯ ಕಾರ್ಯಕರ್ತರೂ ಒತ್ತಾಯ ಮಾಡಿದ್ದರು. ಆದರೆ, ಕ್ಷೇತ್ರ ದೂರವಾಗುತ್ತದೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದರು. ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಅಖಾಡಕ್ಕಿಳಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ತಾವು ಕೋಲಾರದಿಂದ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.
ಕೋಲಾರಕ್ಕಿಂತ ವರುಣಾ ಕ್ಷೇತ್ರ ಸುರಕ್ಷಿತ.. ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಕೋಲಾರಕ್ಕಿಂತ ವರುಣಾ ಕ್ಷೇತ್ರ ಸುರಕ್ಷಿತ ಎಂದು ಅವರ ಬೆಂಬಲಿಗರಾಗಿರುವ ಮಧುಗಿರಿಯ ಮಾಜಿ ಶಾಸಕ ಕೆ ಎನ್ ರಾಜಣ್ಣ ಸೋಮವಾರ ಹೇಳಿದ್ದಾರೆ.